ಮಂಗಳೂರು, ಮಾ 27: ಮಂಗಳೂರಿನಲ್ಲಿ ಮತ್ತೆ ಭೂಗತ ಲೋಕ ಸದ್ದು ಮಾಡಿದೆ. ನಗರದಲ್ಲಿ ಪಶು ಔಷದಿಗಳ ಉತ್ಪಾದನಾ ಸಂಸ್ಥೆ ಹೊಂದಿರುವ ಉದ್ಯಮಿ ಡಾ.ಅರುಣ್ ಕುಮಾರ್ ಅವರಿಗೆ ಭೂಗತ ಪಾತಕಿ ಕಲಿ ಯೋಗೀಶ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ಹಲವು ಬಾರಿ ಇಂಟರ್ನೆಟ್ ನಿಂದ ಕರೆ ಮಾಡಿದ್ದು 50 ಲಕ್ಷ ಹಫ್ತಾ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ನ ವ್ಯವಸ್ಥಾಪಕ ಪಾಲುದಾರರಾಗಿರುವ ಅರುಣ್ ಅವರಿಗೆ ಭೂಗತ ಪಾತಕಿ ಕಲಿ ಯೋಗೀಶ್ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕಳೆದ ಮಾರ್ಚ್ 17 ರಿಂದ ಮಾರ್ಚ್ 23ರವರೆಗೆ ನಾನಾ ಇಂಟರ್ನೆಟ್ ನಂಬರ್ ಗಳಿಂದ ಬೆದರಿಕೆ ಕರೆ ಮಾಡಿದ್ದಾನೆ. ತನ್ನನ್ನು ತಾನು ಕಲಿ ಯೋಗೀಶ್ ಎಂದು ಪರಿಚಯಿಸಿಕೊಂಡಿರುವ ಮಾತನಾಡಿರುವ ಆತ, ಅರುಣ್ ಅವರ ಮೊಬೈಲ್ ಗೂ ಅವ್ಯಾಚವಾಗಿ ನಿಂದಿಸಿ ಸಂದೇಶವನ್ನು ಕಳುಹಿಸಿದ್ದಾನೆ.
ಡಾ. ಅರುಣ್ ಕುಮಾರ್ ರೈ ಅವರಿಗೆ ಜೀವ ಬೆದರಿಕೆ ಹಾಕಿರುವ ಕಲಿ ಯೋಗೀಶ್, 50ಲಕ್ಷ ರೂಪಾಯಿ ಹಫ್ತಾ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಲಾಗಿದೆ. ಹಣ ನೀಡದಿದ್ದಲ್ಲಿ ತನ್ನ ಹುಡುಗರನ್ನು ಮತ್ತು ಶೂಟರ್ ಗಳನ್ನು ಕಚೇರಿಗೆ ಕಳುಹಿಸಿ ಗುಂಡಿನ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆ ಕುರಿತು ನಗರದ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ದೂರವಾಣಿ ಕರೆಗಳ ದಾಖಲೆ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.