ಕಾಸರಗೋಡು, ಜೂ 05 (DaijiworldNews/SM): ಸಂಪರ್ಕ ಮೂಲಕ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಕಟ್ಟುನಿಟ್ಟಿನ ಮುಂಜಾಗ್ರತಾ ವಹಿಸಬೇಕು ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೋವಿಡ್ 19 ನಿಯಂತ್ರಣ ಚಟುವಟಿಕೆಗಳ ಜಿಲ್ಲಾ ಮಟ್ಟದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಅವಲೋಕನ ಸಭೆಯಲ್ಲಿ ಅವರು ಮಾತನಾಡಿದರು.
ನಿಯಂತ್ರಣ ಚಟುವಟಿಕೆಗಳಲ್ಲಿ ಸರಕಾರಿ ಸಿಬ್ಬಂದಿ ಮಾತ್ರವಲ್ಲ, ಸಮಾಜವೂ ಪರಿಪೂರ್ಣ ರೂಪದಲ್ಲಿ ತೊಡಗಿಕೊಳ್ಳಬೇಕು. ಸಾರ್ವಜನಿಕರು ಮತ್ತು ಸ್ವಸೇವಾ ಸಂಘಟನೆಗಳು ಈ ನಿಟ್ಟಿನಲ್ಲಿ ಸಕ್ರಿಯ ಭಾಗವಹಿಸುವಿಕೆ ನಡೆಸಬೇಕು ಎಂದವರು ತಿಳಿಸಿದರು.
ಇತರ ರಾಜ್ಯಗಳಿಂದ, ವಿದೇಶಗಳಿಂದ ಆಗಮಿಸಿದವರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ನಿಗಾ ಸೌಲಭ್ಯ ಬಲಪಡಿಸಬೇಕು. ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳ ಚಟುವಟಿಕೆಗಳು ಚುರುಕಾಗಬೇಕು. ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಪೂರ್ಣ ಬೆಂಬಲ ನೀಡಬೇಕು ಎಂದವರು ವಿವರಿಸಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ವಲಯ ಕಂದಾಯಾಧಿಕಾರಿ ಅಹಮ್ಮದ್ ಕಬೀರ್, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಮೊದಲಾ ದವರು ಉಪಸ್ಥಿತರಿದ್ದರು.