ಮಂಗಳೂರು, ಜೂ 06 (Daijiworld News/MSP): ಲಾಕ್ ಡೌನ್ ಅವಧಿ ಬಳಿಕ ಇದೀಗ ದೇವಸ್ಥಾನಗಳನ್ನು ಭಕ್ತರಿಗೆ ತೆರೆಯಲು ಸಮಯ ಕೂಡಿಬಂದಿದೆ ಜೂ. 8 ರಿಂದ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಇನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಜೂ. 8 ರಿಂದ ಮಾಡಿಕೊಡಲಾಗುವುದೆಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ|ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿಯವರು ತಿಳಿಸಿದ್ದಾರೆ.
ಇನ್ನು ಮುಜರಾಯಿ ಇಲಾಖೆಯ ಆದೇಶದಂತೆ ಕೊಲ್ಲೂರು, ಕಟೀಲು ದೇವಸ್ಥಾನಗಳೂ ಸೋಮವಾರ ತೆರೆಯಲಿದೆ. ಆದರೆ ಈ ಎರಡು ದೇವಾಲಯಗಳಲ್ಲಿ ಸದ್ಯಕ್ಕೆ ಅನ್ನಪ್ರಸಾದದ ವ್ಯವಸ್ಥೆ ಇರುವುದಿಲ್ಲ.
ದೇವರ ದರ್ಶನಕ್ಕೆ ಧರ್ಮಸ್ಥಳದ ದೇವಳದಲ್ಲಿ, ಅನ್ನಪೂರ್ಣ ಭೋಜನ ಮಂದಿರದಲ್ಲಿ, ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಮುಖಕ್ಕೆ ಮಾಸ್ಕ್ ಧರಿಸಿರಬೇಕು, ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಕೈಗೆ ಸ್ಯಾನಿಟೈಸರ್ ಹಾಕಿ ದೇವಸ್ಥಾನದ ಒಳ ಪ್ರವೇಶ ಮಾಡಬೇಕು.