ಮಸ್ಕತ್, ಮಾ. 27: ಸರಿಯಾದ ದಾಖಲೆ ಪತ್ರಗಳಿಲ್ಲದ ಕಾರಣ ತವರಿಗೆ ಹಿಂತಿರುಗಲು ಸಾಧ್ಯವಾಗದೆ ಅನಾರೋಗ್ಯ ಪೀಡಿತರಾಗಿ ಜೀವನ್ಮರಣದ ಹೋರಾಟದಲ್ಲಿದ್ದ ಕರಾವಳಿಯ ವ್ಯಕ್ತಿಯೊಬ್ಬರನ್ನು ಮರಳಿ ತವರಿಗೆ ಕಳುಹಿಸುವ ಯತ್ನದಲ್ಲಿ ಮಸ್ಕತ್ ನ ಭಾರತೀಯ ಸಾಮಾಜಿಕ ಸಹಾಯ ಸಂಸ್ಥೆಯೊಂದು ಯಶಸ್ವಿಯಾಗಿದೆ. ಹಳೆಯಂಗಡಿ ಚೇಳಾರ್ ನಿವಾಸಿ ಮುಹಮ್ಮದ್ ಕಬೀರ್ ಎಂಬವರು ಒಮಾನ್ ನ ಮಸ್ಕತ್ ನಗರದಲ್ಲಿ ಸಂಕಷ್ಟಕ್ಕೀಡಾಗಿದ್ದ ವ್ಯಕ್ತಿಯಾಗಿದ್ದು, ನಿರಂತರ 10 ದಿನಗಳ ಕಾಲ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ಬಳಿಕ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಊರಿಗೆ ಕಳುಹಿಸಲು ಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಮಸ್ಕತ್ ವಿಮಾನ ನಿಲ್ದಾಣದ ಮೂಲಕ ಮಾರ್ಚ್ 27 ತವರಿಗೆ ಕಳುಹಿಸಲಾಗಿದೆ ಎಂದು ಸೋಶಿಯಲ್ ಫೋರಮ್ ನ ಅಬ್ದುಲ್ ಹಮೀದ್ ತಿಳಿಸಿದ್ದಾರೆ. ಈಗಾಗಲೇ ಮನೆಯವರಿಗೆ ಘಟನೆಯ ಎಲ್ಲ ಮಾಹಿತಿಗಳನ್ನು ನೀಡಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಹೆಚ್ಚಿನ ಚಿಕಿತ್ಸೆಗಾಗಿ ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯಲು ಬೇಕಾದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಘಟನೆಯ ವಿವರ: ಸಂತ್ರಸ್ತ 50ರ ಹರೆಯದ ಕಬೀರ್ ಅವರು 2013 ರಲ್ಲಿ ದುಬೈಗೆ ಉದ್ಯೋಗಕ್ಕೆ ತೆರಳಿದ್ದು 5 ವರ್ಷಗಳ ಕಾಲ ದಣಿವರಿಯದೆ ದುಡಿದಿದ್ದಾರೆ. ಈ ಮಧ್ಯೆ ಅವರು ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಅಗತ್ಯ ದಾಖಲೆ ಪತ್ರಗಳನ್ನು ಕಳೆದುಕೊಂಡಿದ್ದು ಊರಿಗೆ ಹಿಂತಿರುಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ಮೂತ್ರಕೋಶದಲ್ಲಿ ತೊಂದರೆ ಕಾಣಿಸಿಕೊಂಡಾಗ ಒಮಾನ್ ಮಾರ್ಗವಾಗಿ ಊರಿಗೆ ಹಿಂತಿರುಗಲು ಪ್ರಯತ್ನಿಸಿದ್ದರು. ಆದರೆ ಒಮಾನ್ ನ ಮಸ್ಕತ್ ನಗರಕ್ಕೆ ತಲುಪಿದ ಅವರಿಗೆ ಆರೋಗ್ಯ ಪರಿಸ್ಥಿತಿ ಉಲ್ಬಣಿಸಿ ನಡೆದಾಡಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಆದರೆ ಅವರಲ್ಲಿ ಸರಿಯಾದ ದಾಖಲೆ ಪತ್ರಗಳು ಇಲ್ಲದಿರುವುದರಿಂದ ಪ್ರಕರಣವು ಜಟಿಲಗೊಂಡಿತ್ತು.ನಗರದಲ್ಲಿ ಅನಾಥರಾಗಿ ಬಿದ್ದಿದ್ದ ಕಬೀರ್ ಅವರನ್ನು ಗಮನಿಸಿದ ಸೋಶಿಯಲ್ ಫೋರಮ್ ಎನ್ನುವ ಸಾಮಾಜಿಕ ಸಂಸ್ಥೆ ಈ ಪ್ರಕರಣವನ್ನು ಬಗೆಹರಿಸುವ ಕಾನೂನಾತ್ಮಕ ಪರಿಹಾರ ಮಾರ್ಗೋಪಾಯಗಳ ಬಗ್ಗೆ ಒಮಾನ್ ಪೊಲೀಸ್ ಇಲಾಖೆ ಮತ್ತು ಭಾರತೀಯ ರಾಯಭಾರ ಕಚೇರಿ ಮತ್ತು ಆಸ್ಪತ್ರೆಯ ಆಡಳಿತ ವಿಭಾಗದೊಂದಿಗೆ ಸಮಾಲೋಚನೆ ನಡೆಸಿತ್ತು. ಇವೆಲ್ಲಾ ಪ್ರಯತ್ನಕ್ಕೂ ಭಾರತೀಯ ರಾಯಭಾರಿ ಕಚೇರಿಯೂ ಮಾನವೀಯ ನೆಲೆಯಲ್ಲಿ ಸ್ಪಂದಿಸಿ ಭಾರತಕ್ಕೆ ಹಿಂತಿರುಗುವ ವ್ಯವಸ್ಥೆಯನ್ನು ಮಾಡಿತು. ಇದೀಗ ಕಬೀರ್ ಅವರು ಚೇತರಿಸಿಕೊಳ್ಳುತ್ತಿದ್ದರೂ, ಅವರಿಗೆ ಇನ್ನೊಂದು ಶಸ್ತ್ರಚಿಕಿತ್ಸೆ ಹಾಗೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ಕಾರಣ ಅವರನ್ನು ಊರಿಗೆ ತಲುಪಿಸಲು ಬೇಕಾದ ತುರ್ತು ನಿರ್ಗಮನ ಪಾಸ್ ಪೋರ್ಟ್ ಮತ್ತು ಗಾಲಿಕುರ್ಚಿ ಸಹಿತ ಪ್ರಯಾಣದ ವಿಮಾನದ ಟಿಕೇಟನ್ನು ವ್ಯವಸ್ಥೆಗೊಳಿಸಿ ಮಸ್ಕತ್ ನಿಂದ ಕಳುಹಿಸಿ ಕೊಟ್ಟಿದ್ದು ಇಂದು ಸಂಜೆ ಕಬೀರ್ ಅವರು ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ.