ಬಂಟ್ವಾಳ , ಜೂ 06 (Daijiworld News/MSP): ಹೊರದೇಶ ಹಾಗೂ ಹೊರ ರಾಜ್ಯಗಳಿಂದ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕ್ವಾರಂಟೈನ್ ಬಲಪಡಿಸಲಾಗಿದ್ದು, ಇದೇ ಮೊದಲ ಬಾರಿಗೆ ಕ್ವಾರಂಟೈನ್ ವಾಚ್ ಅನ್ನು ಅನುಷ್ಠಾನಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೇಳಿದರು.
ಬಂಟ್ವಾಳ ತಾಲೂಕಿನ ವಿವಿಧ ಕ್ವಾರಂಟೈನ್ ಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲಿಸಿದ ಅವರು, ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೊರೋನಾ ವಾರಿಯರ್ಸ್ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಹಾರಾಷ್ಟ್ರ ಹಾಗೂ ನೆರೆಯ ರಾಜ್ಯ, ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ನಿಗದಿಪಡಿಸಿದ ದಿನಗಳ ಕ್ವಾರಂಟೈನ್ ಅವಧಿಯಲ್ಲಿ ಅವರು ಮನೆಯಿಂದ ಹೊರಗೆ ಬರಬಾರದು, ಈ ನಿಟ್ಟಿನಲ್ಲಿ ಅವರ ಮೇಲೆ ನಿಗಾ ಇಡುವ ಸಲುವಾಗಿ "ಕ್ವಾರಂಟೈನ್ ವಾಚ್" ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಗ್ರಾಮಮಟ್ಟದಲ್ಲಿ ವಾರ್ಡ್ ಹಂತದಲ್ಲಿ ಈ ಕುರಿತಾಗಿ ವಿಭಾಗಗಳನ್ನು ಗುರುತಿಸಲಾಗಿದ್ದು, ಗ್ರಾಮಪಂಚಾಯತ್, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆಶಾಕಾರ್ಯಕರ್ತೆಯರಿಗೆ ಈ ಬಗ್ಗೆ ವಿಶೇಷ ಜವಬ್ದಾರಿ ವಹಿಸಲಾಗಿದೆ ಎಂದವರು ತಿಳಿಸಿದರು.
ಹೋಂ ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳ ಮನೆಯನ್ನು ಗುರುತಿಸಿ, ಪ್ರತಿನಿತ್ಯ ಆ ಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರು, ಗ್ರಾಮಪಂಚಾಯತ್ ಸಿಬ್ಬಂದಿಗಳು ಆ ವ್ಯಕ್ತಿ ಮನೆಯಲ್ಲಿಯೇ ಇರುವ ಕುರಿತಾಗಿ ಫೊಟೋ ದಾಖಲಾತಿ ಮಾಡಲಾಗುತ್ತದೆ ಎಂದವರು ವಿವರಿಸಿದರು.
ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಕೋವಿಡ್ 19 ರ ಜಾಗೃತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದ್ದು, ಭೇಟಿ ನೀಡಿದ ಪ್ರತಿಯೊಬ್ಬರ ಮಾಹಿತಿ ಕಲೆಹಾಕಲಾಗುತ್ತಿದೆ. ಅವರನ್ನು ಹೋಂ ಕ್ವಾರಂಟೈನ್ , ವಸತಿ ಕ್ವಾರಂಟೈನ್ ಹಾಗೂ ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಬಂಟ್ವಾಳದಲ್ಲಿ ಹೊಸದಾಗಿ ಕೊರೋನಾ ಫಾಸಿಟಿವ್ ಪತ್ತೆಯಾಗಿರುವ ನಾವೂರು, ಅಮ್ಟೂರು ಹಾಗೂ ನೆಟ್ಲ ಮುಡ್ನೂರು ಗ್ರಾಮಗಳಲ್ಲಿ ಫಾಸಿಟಿವ್ ಬಂದಿರುವ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಕಂಟೈನ್ಮೆಂಟ್ ಝೋನ್ ಅನ್ನು ರಚಿಸಲಾಗಿದೆ ಎಂದರು.
ಹೆಲ್ತ್ ವಾಚ್ ಸರ್ವೆ ಶೇ.90 ರಷ್ಟು ಪೂರ್ಣ :
ಮನೆಯಲ್ಲಿರುವ ಪ್ರತಿಯೊಬ್ಬರ ಮಾಹಿತಿ ಆರೋಗ್ಯದ ಕುರಿತಾಗಿ ವಿವರ ದಾಖಲಿಸುವ ಹೆಲ್ತ್ ವಾಚ್ ಸರ್ವೇಕಾರ್ಯ ಜಿಲ್ಲೆಯಲ್ಲಿ ನಡೆದಿದ್ದು, ಬಂಟ್ವಾಳದಲ್ಲಿ ಶೇ 90 ರಷ್ಟು ಸರ್ವೇಕಾರ್ಯ ನಡೆದಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಶಿಕ್ಷಕರ ನೆರವಿನೊಂದಿಗೆ ಈ ಸಮೀಕ್ಷೆ ನಡೆಸಲಾಗಿದ್ದು, ಇದರ ಮೂಲಕ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಪ್ರದೇಶಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲು ನೆರವಾಗುತ್ತದೆ ಎಂದರು. ಆರೋಗ್ಯ ಸೇತು ಆ್ಯಪ್ ಮೂಲಕ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಕಾರ್ಯ ಆಗುತ್ತಿದೆ ಎಂದ ಅವರು ಕೊರೋನಾ ನಿಗ್ರಹಕ್ಕೆ ಪ್ರತಿಯೊಬ್ಬರೂ ಜಿಲ್ಲಾಡಳಿತದ ಜೊತೆ ಸಹಕಾರ ನೀಡುವಂತೆ ಮನವಿ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಗೆ 345 ವಿದ್ಯಾರ್ಥಿಗಳು ನೆರೆಯ ಕೇರಳದಿಂದ ಪರೀಕ್ಷೆಗೆ ಹಾಜರಾಗಬೇಕಿದ್ದು, ಪರೀಕ್ಷಾ ಪ್ರವೇಶಪತ್ರ ತೋರಿಸಿದವರನ್ನು ಪರೀಕ್ಷಾ ಕೇಂದ್ರಗಳಿಗೆ ಕರೆತಂದು ಮರಳಿ ವಾಪಾಸು ಬಿಡುವಂತಾ ವ್ಯವಸ್ಥೆ ಮಾಡಲಾಗಿದೆ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ., ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್.ಸಿ, ಬಂಟ್ವಾಳ ತಹಶೀಲ್ದಾರ್ ರಶ್ಮೀ ಎಸ್.ಆರ್., ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಾಲೂಕು ವೈದ್ಯಾಧಿಕಾರಿ ದೀಪಾಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಈ ಸಂದರ್ಭ ಉಪಸ್ಥಿತರಿದ್ದರು.