ಕಾರ್ಕಳ,ಜೂ 06 (Daijiworld News/MSP): ಎರಡನೇ ಅವಧಿಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಒಂದು ವರ್ಷ ತುಂಬಿದ್ದು, ದೇಶದಲ್ಲಿ ಅನೇಕ ದಶಕಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ಹೆಗ್ಗಳಿಕೆ ಈ ಸರಕಾರಕ್ಕಿದೆ ಎಂದು ಸರಕಾರದ ಮುಖ್ಯ ಸಚೇತಕ ಹಾಗೂ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ವಿಕಾಸದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ ಬಂದ ಬಳಿಕ ಸುಮಾರು 73 ವರ್ಷಗಳ ಕಾಲ ದೇಶ ಎದುರಿಸಿದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿದೆ. ಆರ್ಟಿಕಲ್ 370ರ ರದ್ದತಿ, ಪೌರತ್ವ ತಿದ್ದುಪಡಿ ವಿಧೇಯಕ-2009, ರಾಮಮಂದಿರ ನಿರ್ಮಾಣಕ್ಕೆ ಓಂಕಾರ, ತ್ರಿವಳಿ ತಲಾಖ್ಗೆ ಮುಕ್ತಿ, ಕರ್ತಾರ್ಪುರ್ ಕಾರಿಡಾರ್ ಯೋಜನೆ, ಬ್ರೂ ರಿಯಾಂಗ್ ಒಪ್ಪಂದ ಮುಂತಾದ ಸ್ಮರಣೀಯ ಕಾರ್ಯವನ್ನು ನಡೆಸಿದ್ದು, ಜನಮಾನಸದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಸ್ಪಂದಿಸಿದೆ ಎಂದರು. ಅದೇ ಹಿನ್ನೆಲೆಯಲ್ಲಿ ಕಾರ್ಕಳ ಘಟಕವು ಕೇಂದ್ರ ಸರಕಾರದ ಸಾಧನೆಯನ್ನು ತಿಳಿಸುವ ಉದ್ದೇಶದಿಂದ ಪ್ರಧಾನಿಯವರು ದೇಶದ ಜನರಿಗೆ ಬರೆದ ಪತ್ರ, ಜನರೇ ಪ್ರೇರಕ, ನಾನು ಪ್ರಧಾನ ಸೇವಕ ಎನ್ನುವ ಮಾಹಿತಿಯುಳ್ಳ ಕರಪತ್ರವನ್ನು ಮನೆ ಮನೆಗಳಿಗೆ ತಲುಪಿಸುವ ಕೆಲಸವನ್ನು ಜೂ.10 ರಂದು ನಡೆಸಲಿದ್ದೇವೆ ಎಂದರು.
ಅಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ 210 ಬೂತ್ಗಳಲ್ಲಿ ತಲಾ 2 ಕಾರ್ಯಕರ್ತರಂತೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮನೆ ಮನೆ ಭೇಟಿ ನಡೆಯಲಿದೆ ಎಂದರು. ಪ್ರಧಾನಿ ಘೋಷಣೆಯಂತೆ "ಆತ್ಮನಿರ್ಭರ ಭಾರತ"ಕ್ಕೆ ಚಾಲನೆ ಎಂಬಂತೆ ಸ್ವಾಭಿಮಾನದಿಂದ ಸ್ವಾವಲಂಬಿ ಚಿಂತನೆಯನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸುವ ಸಂಕಲ್ಪವನ್ನು ಕೂಡಾ ಇದರ ಜತೆ ಮಾಡಲಾಗುವುದು ಎಂದರು.
ಕೊರೊನಾ ವಿರುದ್ದ ಸೂಕ್ತಕ್ರಮ...!
ಕಾರ್ಕಳ ತಾಲೂಕಿನಲ್ಲಿ ಕೊರೊನಾ ವಿರುದ್ದ ಜಾಗೃತಿಯನ್ನು ಮೂಡಿಸಲಾಗಿದೆ. ಎ.1 ರಿಂದ 30ರವರೆಗೆ ತಾಲೂಕಿನ ಎಲ್ಲಾ ಕಡೆ 25 ಸಾವಿರಕ್ಕೂ ಮಿಕ್ಕಿದ ಕಿಟ್ಗಳನ್ನು ವಿತರಿಸಲಾಗಿದೆ. ಜತೆಗೆ ಔಷಧಿಯನ್ನು ಪೂರೈಸುವ ಕೆಲಸ ಮಾಡಲಾಗಿದೆ. ಅನ್ಯರಾಜ್ಯದಿಂದ ಆಗಮಿಸಿದ ಜನತೆಗಾಗಿ ತಾಲೂಕಿನ 38 ಕ್ವಾರೈಂಟೆನ್ ಸೆಂಟರ್ ತೆರೆದು, 2500ಜನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಧಿಕಾರಿಗಳ ಜತೆ ಕಾರ್ಯಕರ್ತರು ಸಹಭಾಗಿತ್ವ ವಹಿಸಿ ಯಶಸ್ವೀಗೆ ಪ್ರಯತ್ನಿಸಲಾಗಿದೆ. ಅಲ್ಲದೆ ಕೊರೊನಾ ಬಾಧಿತರಿಗಾಗಿ 130 ಬೆಡ್ಗಳ ಆಸ್ಪತ್ರೆ ತೆರೆಯಲಾಗಿದ್ದು, ಈಗಾಗಲೇ ಹಲವರು ಗುಣಮುಖರಾಗಿ ಮನೆಗೆ ತೆರಳುವಲ್ಲಿಯೂ ಶ್ರಮಿಸಲಾಗಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಮಣಿರಾಜ ಶೆಟ್ಟಿ, ಅನಂತಕೃಷ್ಣ ಶೆಣೈ, ಮಹಾವೀರ ಹೆಗ್ಡೆ, ನವೀನ್ ನಾಯಕ್, ಜಯರಾಮ್ ಸಾಲ್ಯಾನ್, ಸುಮಿತ್ ಶೆಟ್ಟಿ, ಉದಯ ಎಸ್.ಕೋಟ್ಯಾನ್, ದಿವ್ಯಾಶ್ರೀ ಅಮೀನ್, ಜ್ಯೋತಿ ಹರೀಶ್, ರೇಶ್ಮ ಶೆಟ್ಟಿ, ಅರುಣ್ ಹೆಗ್ಡೆ, ಹರೀಶ್ ಶೆಣೈ, ಕರುಣಾಕರ ಎಸ್.ಕೋಟ್ಯಾನ್, ಸುಚೀಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.