ಕಾರವಾರ, ಮಾ 28: ನೀತಿ ಸಂಹಿತೆ ಜಾರಿಯಾದ ಮೊದಲ ದಿನವೇ ಲಕ್ಷ ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಹೊನ್ನವಾರದಲ್ಲಿ ನಡೆದಿದೆ.
ಹೊನ್ನವಾರದ ಅಪರಾಧ ವಿಭಾಗದ ಪಿಎಸ್ಐ ಹರೀಶ್ ಎಚ್.ವಿ.ಹೊನ್ನಾವರದ ಸಾಗರ ರೆಸಿಡೆನ್ಸಿ ಸಮೀಪ ವಾಹನ ತಪಾಸಣೆ ಮಾಡುತ್ತಿರುವಾಗ ಸರ್ಕಾರಿ ಕಾರಿನಲ್ಲಿ ದೊಡ್ಡ ಮೊತ್ತದ ಹಣ ಪತ್ತೆಯಾಗಿದ್ದು, ಅಧಿಕೃತ ದಾಖಲೆ ಪತ್ರಕ್ಕಾಗಿ ಕಾರಿನಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಕಾರ್ಯ ನಿರ್ವಾಹಕ ಇಂಜಿನಿಯರ್ ಗಂಗ ನಾಯ್ಕ ಹಾಗೂ ಚಾಲಕ ನನ್ನು ಪ್ರಶ್ನಿಸುತ್ತಿದಾಗ ಸಮರ್ಪಕ ಉತ್ತರ ನೀಡಿಲಿಲ್ಲ. ಕುಮಟಾದಿಂದ ಭಟ್ಕಳದ ಕಡೆಗೆ ಹಣವನ್ನು ಸಾಗಿಸುತ್ತಿದ್ದು, 2000, 500, 100 ರೂ. ಮುಖಬೆಲೆಯ 7 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ಲೈಯಿಂಗ್ ಸ್ಕ್ವಾಡ್ ಭಾಸ್ಕರ್ ದೇವಾಡಿಗ ಹಾಗೂ ಪ್ರಭಾರಿ ತಹಸೀಲ್ದಾರ್ ಮಾರುತಿ ನಾಯ್ಕ ಅವರು ಪರಿಶೀಲನೆ ನಡೆಸಿ ವಶಪಡಿಸಿಕೊಂಡ 7 ಲಕ್ಷ ರೂ.ಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲು ಇಡಲಾಗಿದೆ.ಹಣ ಸಾಗಿಸುತ್ತಿದ್ದ ಕಾರನ್ನು ಕುಮಟಾ ಉಪವಿಭಾಗಾಧಿಕಾರಿಗಳ ಸುಪರ್ದಿಗೆ ನೀಡಲಾಗಿದೆ. ಗಂಗ ನಾಯ್ಕ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಈ ಹಣ ನನಗೆ ಸಂಬಂಧಿಸಿದ್ದಲ್ಲ ಎಂದು ಅವರು ಹೇಳಿಕೆ ನೀಡಿದ್ದು, ತನಿಖೆ ಮುಂದುವರಿಸಲಾಗಿದೆ.