ಮಂಗಳೂರು, ಜೂ. 07 (DaijiworldNews/MB) : ಲಾಕ್ಡೌನ್ ಅವಧಿಯಲ್ಲಿ ವಿದ್ಯುತ್ ಬಿಲ್ ಅಧಿಕ ಬಂದಿರುವ ಬಗ್ಗೆ ಸಾರ್ವಜನಕರಿಂದ ಬಂದಿರುವ ದೂರಿಗೆ ತ್ವರಿತವಾಗು ಸ್ಪಂದಿಸಲು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಈ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ಮಾರ್ಚ್-ಎಪ್ರಿಲ್ ಬಿಲ್ಲನ್ನು ಸೇರಿಸಿ ನೀಡಿರುವ ಕಾರಣ ಬಿಲ್ ಅಧಿಕವಾಗಿದೆ. ಆದರೆ ಪ್ರತೀ ಯುನಿಟ್ ದರ ಲೆಕ್ಕ ಹಾಕುವಾಗ ಸಮರ್ಪಕವಾಗಿಲ್ಲ ಎಂದು ಸಾರ್ವಜನಿಕರಿಂದ ಅತೃಪ್ತಿ ವ್ಯಕ್ತವಾಗಿವೆ. ಈ ಬಗ್ಗೆ ಮೆಸ್ಕಾಂ ಸಾರ್ವಜನಿಕ ಕುಂದು-ಕೊರತೆ ಸಭೆ ನಡೆಸಿ, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಬೇಕು. ಸಾಮಾಜಿಕ ಜಾಲತಾಣ, ಸಹಾಯವಾಣಿಗಳ ಮೂಲಕವೂ ದೂರುಗಳಿಗೆ ಶೀಘ್ರವಾಗಿ ಪರಿಹಾರ ನೀಡಬೇಕು. ಕಂತಿನಲ್ಲಿ ಬಿಲ್ ಮೊತ್ತ ಪಾವತಿಗೆ ಅವಕಾಶ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್., ನಿಗದಿ ಪಡಿಸಿದ ದರದಲ್ಲೇ ಗ್ರಾಹಕರಿಗೆ ಬಿಲ್ ನೀಡಲಾಗಿದೆ. ಅದರಲ್ಲಿ ಯಾವುದೇ ಲೋಪ ಉಂಟಾಗಿಲ್ಲ. ಬಡ್ಡಿಯನ್ನೂ ಕುಡಾ ಹಾಕಿಲ್ಲ. ಹೆಚ್ಚುವರಿಯಾಗಿ ಬಿಲ್ನಲ್ಲಿ ನಮೂದಿ ಮಾಡಲಾಗಿದ್ದರೆ ಅದನ್ನು ಮುಂದಿನ ಬಿಲ್ನಲ್ಲಿ ಹೊಂದಾಣಿಸಲಾಗುವುದು. ಹಾಗೆಯೇ ಬಿಲ್ ಮೊತ್ತವನ್ನು ಕಂತುಗಳಾಗಿ ಪಾವತಿಸ ಬಹುದು. ಯಾವುದೇ ದೂರುಗಳಿಗೆ ಆಯಾ ಮೆಸ್ಕಾಂ ಉಪವಿಭಾಗದ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹರಿಸಿಕೊಳ್ಳಬಹುದು. ಸಹಾಯವಾಣಿ ಸಂಖ್ಯೆ 1912 ಅಥವಾ ವಾಟ್ಸ್ಆ್ಯಪ್ 9483041912ಕ್ಕೆ ದೂರು ನೀಡಬಹುದು ಎಂದು ತಿಳಿಸಿದ್ದಾರೆ.