ಕಾಪು, ಮಾ 28 : ತುಳುನಾಡಿನಲ್ಲಿ ಇತಿಹಾಸ ಪ್ರಸಿದ್ಧವಾಗಿರುವ ಕಾಪುವಿನ ಮೂರು ಮಾರಿಗುಡಿಗಳಲ್ಲಿ ಏಕಕಾಲದಲ್ಲಿ ನಡೆಯಲಿರುವ ಕಾಲಾವಧಿ ಸುಗ್ಗಿ ಮಾರಿಪೂಜಾ ಜಾತ್ರೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದೆ.
ಶ್ರೀ ಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಶ್ರೀ ಮೂರನೇ ಕಲ್ಯ ಮಾರಿಗುಡಿ ದೇವಸ್ಥಾನಗಳಿಗೆ ಕ್ರಮವಾಗಿ ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮೆರವಣಿಗೆಯ ಮೂಲಕ ತರಲಾದ ಆಭರಣ ಮತ್ತು ಮಾರಿಯಮ್ಮ ದೇವಿಯ ಬಿಂಬವನ್ನು ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಿದ ಬಳಿಕ ಸುಗ್ಗಿ ಮಾರಿಪೂಜೆಗೆ ಚಾಲನೆ ನೀಡಲಾಯಿತು.
ಬುಧವಾರ ಸಂಜೆ ಮಾರಿಗುಡಿಗಳಲ್ಲಿ ಮಾರಿಪೂಜಾ ವಿಧಿ - ವಿಧಾನಗಳು ಮುಕ್ತಾಯಗೊಂಡ ಬಳಿಕ ಮಾರಿಯಮ್ಮ ದೇವಿಯ ಬಿಂಬವನ್ನು ಗದ್ದುಗೆಯಿಂದ ಕೆಳಗಿಳಿಸಿ, ಬಿಂಬವನ್ನು ನಿರ್ದಿಷ್ಟ ಪ್ರದೇಶದಲ್ಲಿ ವಿಸರ್ಜಿಸಿದ ಬಳಿಕ ಕಾಪು ಮಾರಿಪೂಜೆಗೆ ಅಧಿಕೃತವಾಗಿ ತೆರೆ ಎಳೆಯಲಾಗುತ್ತದೆ.
ಕಣ್ಮನ ಸೆಳೆದ ಅಲಂಕಾರ : ಕಾಪು ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮೂರು ಮಾರಿಗುಡಿಗಳನ್ನೂ ವಿಶೇಷ ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾಲಂಕಾರದೊಂದಿಗೆ ಅಲಂಕಾರಗೊಳಿಸಲಾಗಿದ್ದು, ವಿವಿಧ ಬಗೆಯ ಮಾರಾಟ ಮಳಿಗೆಗಳು ಭಕ್ತಾಧಿಗಳು ಮತ್ತು ಸಾರ್ವಜನಿಕರನ್ನು ಆಕರ್ಷಿಸುತ್ತಿವೆ.
ಲಕ್ಷಾಂತರ ಮಂದಿ ಭಾಗಿ : ಕಾಪು ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ ವರ್ಷಕ್ಕೆ ಮುರು ಬಾರಿ ಅಂದರೆ ಆಟಿ, ಜಾರ್ದೆ ಮತ್ತು ಸುಗ್ಗಿ ಮಾರಿಪೂಜೆ ನಡೆಯುತ್ತದೆ. ಇದರಲ್ಲಿ ಸುಗ್ಗಿ ಮಾರಿಪೂಜೆಯ ಸಂದರ್ಭ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮಾತ್ರವಲ್ಲದೇ ಉತ್ತರ ಕನ್ನಡ, ಘಟ್ಟ ಪ್ರದೇಶ ಹಾಗೂ ಕೇರಳ, ಮುಂಬಯಿ ಸಹಿತ ವಿದೇಶಗಳಿಂದಲೂ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸಿದರು.
ಗದ್ದಿಗೆ ಪೂಜೆ ವಿಶೇಷ : ಗದ್ದಿಗೆಯೇ ಪ್ರಧಾನವಾಗಿರುವ ಕಾಪುವಿನ ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದುಗೆಯೇ ಪ್ರಧಾನವಾಗಿದ್ದು, ಗದ್ದಿಗೆಪೂಜೆ ಇಲ್ಲಿನ ವಿಶೇಷ ಸೇವೆಯಾಗಿದೆ. ಉಳಿದಂತೆ ಹೂವಿನ ಪೂಜೆ, ಕುಂಕುಮಾರ್ಚನೆ ಸೇವೆ ಹಾಗೂ ರಕ್ತಾಹಾರ ರೂಪದಲ್ಲಿ ಕುರಿ, ಆಡು, ಕೋಳಿಗಳನ್ನು ಸಮರ್ಪಿಸಲಾಗುತ್ತದೆ.
ಬಿಗು ಪೊಲೀಸ್ ಬಂದೋಬಸ್ತ್ : ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮೂರು ಮಾರಿಗುಡಿಗಳ ಪರಿಸರದಲ್ಲೂ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳ ಸಹಿತವಾಗಿ ಸುಮಾರು ೧೦೦ಕ್ಕೂ ಅಧಿಕ ಮಂದಿ ಪೊಲೀಸರನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದ್ದು, ಆಯ್ದ ಪ್ರದೇಶಗಳಲ್ಲಿ 18 ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದೆ.
ಪುರಸಭೆ ವತಿಯಿಂದ ಸ್ವಚ್ಛತೆಗೆ ಆದ್ಯತೆ
ಎರಡು ದಿನಗಳ ಕಾಲ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಕಾಪು ಸಿದ್ಧಗೊಂಡಿದ್ದು, ಸ್ವಚ್ಛ ಕಾಪು - ಸುಂದರ ಕಾಪು ಘೋಷಣೆಯೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಕಾಪು ಪುರಸಭೆ ಕೂಡಾ ವಿವಿಧ ಸಿದ್ಧತೆಗಳನ್ನು ನಡೆಸಿದೆ.
ಕಾಪುವಿನ ಮೂರು ಮಾರಿಗುಡಿಗಳ ಆಸುಪಾಸಿನಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಪುರಸಭೆ ವ್ಯಾಪಕ ಕ್ರಮ ತೆಗೆದುಕೊಂಡಿದೆ. ಸಂಪೂರ್ಣ ಸ್ವಚ್ಛತೆಯ ಚಿಂತನೆಯೊಂದಿಗೆ ಸುಮಾರು ೨೫ ಮಂದಿ ಪೌರ ಕಾರ್ಮಿಕರನ್ನು ಸ್ವಚ್ಛತಾ ಕೆಲಸಕ್ಕಾಗಿ ನಿಯೋಜಿಸಲಾಗಿದ್ದು, ಮಂಗಳವಾರ ಬೆಳಿಗ್ಗೆಯಿಂದಲೇ ಸ್ವಚ್ಚತಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ.
24*7 ಮಾದರಿಯಲ್ಲಿ ಕಾರ್ಯ ನಿರ್ವಹಣೆ : ಕಾಪು ಪೇಟೆ ಮತ್ತು ಮೂರು ಮಾರಿಗುಡಿಗಳ ವಠಾರವೂ ಸೇರಿದಂತೆ ವಿವಿಧೆಡೆಗಳಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕಸ - ತ್ಯಾಜ್ಯ ಎಸೆಯಲು 45 ಡ್ರಮ್ಗಳನ್ನು ಇಡಲಾಗಿದೆ. ಸ್ವಚ್ಛತೆಯ ಬಗ್ಗೆ ಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧೆಡೆ ಸುಮಾರು 85 ಕ್ಕೂ ಅಧಿಕ ಬೋರ್ಡ್ಗಳನ್ನು ಅಳವಡಿಸಲಾಗಿದೆ. ಇದಕ್ಕೆ ಪೂರಕವಾಗಿ 25 ಮಂದಿ ಪೌರ ಕಾರ್ಮಿಕರು 24*7 ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಪ್ಲಾಸ್ಟಿಕ್ ಬಳಸಿದಲ್ಲಿ ದಂಡ ; ಮುಖ್ಯಾಧಿಕಾರಿ ರಾಯಪ್ಪ ಎಚ್ಚರಿಕೆ : ಘನ ಮತ್ತು ದ್ರವ ತ್ಯಾಜ್ಯವನ್ನು ಬೇರ್ಪಡಿಸಿ ಕಸದ ಬುಟ್ಟಿಯಲ್ಲಿ ಹಾಕುವ ಬಗ್ಗೆ ಹಾಗೂ ಸ್ವಚ್ಚತೆಯನ್ನು ಕಾಪಾಡುವ ಬಗ್ಗೆ ಎಲ್ಲೆಡೆಯಲ್ಲಿ ವಿವಿಧ ಪ್ರಚಾರ ಫಲಕಗಳನ್ನು ಅಳವಡಿಸಲಾಗಿದೆ. ಮಾರಿಪೂಜೆಯ ಸಂದರ್ಭ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಬಳಸಿದಲ್ಲಿ ದಂಡ ವಿಧಿಸಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದ್ದಾರೆ.