ಕಾಸರಗೋಡು, ಜೂ 07 (DaijiworldNews/PY) : ಕರ್ನಾಟಕ ಸರಕಾರ ಪ್ರವೇಶ ಅನುಮತಿ ನೀಡಿದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾಸರಗೋಡ ಜಿಲ್ಲೆಯವರಿಗೆ ಪಾಸ್ ನಿರಾಕರಿಸುತ್ತಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ. ಇದರಿಂದ ರಾಜ್ಯ ಸರಕಾರ ಅನುಮತಿ ಕಾಸರಗೋಡಿನವರಿಗೆ ಮಂಗಳೂರು ಪ್ರವೇಶ ಸಾಧ್ಯವಾಗದೇ ಜನರು ಸಂಕಷ್ಟದಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಅವರು ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಪಾಲಿಸದೆ ಜನರ ಮೇಲೆಯೇ ಯುದ್ಧ ಸಾರಿದ್ದಾರೆ ಎಂದು ಅವರು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಉದ್ಯೋಗಕ್ಕಾಗಿ ತೆರಳುವುದಕ್ಕಾಗಿ ಪಾಸ್ಗಾಗಿ ಅರ್ಜಿಗಳನ್ನು ಸಲ್ಲಿಸಿದರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅಥವಾ ವಿನಾ ಕಾರಣ ಅನುಮತಿ ನಿರಾಕರಿಸುತ್ತಿದೆಯೆಂದು ಬಿಜೆಪಿ ಆರೋಪಿಸಿದೆ. ಅನಗತ್ಯವಾಗಿ ಜನರಿಗೆ ತೊಂದರೆ ಕೊಡುತ್ತಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕೆಲವು ಉನ್ನತ ಅಧಿಕಾರಿಗಳು ಕರ್ನಾಟಕದ ಬಿಜೆಪಿ ಸರ್ಕಾರದ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಸರಗೋಡು ಜಿಲ್ಲಾ ಬಿಜೆಪಿ ಸಮಿತಿ ಆರೋಪಿಸಿದೆ.
ಅಂತರರಾಜ್ಯ ಪ್ರಯಾಣಕ್ಕೆ ಪಾಸ್ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಇದನ್ನು ಅನುಸರಿಸಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಕೂಡ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದ್ದಾರೆ. ಆದರೆ ವಿಪತ್ತು ನಿವ೯ಹಣೆ ಕಾಯ್ದೆ ಮತ್ತು ಅದರ ನಿಯಮಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸೂಪರ್ ಸರ್ಕಾರ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಅಂತರ್ರಾಜ್ಯ ಪಾಸ್ಗಳನ್ನು ಯಾವುದೇ ಕಾರಣ ನೀಡದೇ ನಿರಾಕರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಹಿರಿಯ ಅಧಿಕಾರಿಗಳ ಸ್ಥಾಪಿತ ಹಿತಾಸಕ್ತಿ ಹೊಂದಿದ್ದಾರೆ. ಆದ್ದರಿಂದ ಅಂತಹ ಜನ ವಿರೋಧಿ ನಿಲುವು ತೆಗೆದುಕೊಳ್ಳುವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ದೂರು ನೀಡಲಾಗುವುದೆಂದು ಕೆ. ಶ್ರೀಕಾಂತ್ ತಿಳಿಸಿದ್ದಾರೆ.