ಬೆಳ್ತಂಗಡಿ, ಜೂ. 07 (DaijiworldNews/SM): ಸರಕಾರ ಸೋಮವಾರದಿಂದ ದೇಗುಲಗಳಲ್ಲಿನ ದೇವರ ದರ್ಶನಕ್ಕೆ ಅವಕಾಶವೆಂದು ಪ್ರಕಟಿಸಿದ್ದರೂ ಮುನ್ನಾ ದಿನವೇ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭಕ್ತರ ದಂಡು ಆಗಮಿಸಿದೆ.
ಸಾಂದರ್ಭಿಕ ಚಿತ್ರ
ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಭಕ್ತರು ರವಿವಾರವೇ ಆಗಮಿಸಿದ್ದಾರೆ.ಆಗಮಿಸಿದ ಭಕ್ತರಿಗೆ ಕ್ಷೇತ್ರದ ವತಿಯಿಂದ ಸಾಮಾಜಿಕ ಅಂತರ ಕಾಯ್ದು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಮತ್ತು ವೈದ್ಯರು ಹೇಳಿದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕ್ಷೇತ್ರದಲ್ಲಿ ಅನುಸರಿಸಲಾಗಿದೆ. ಹಲವು ತಿಂಗಳ ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಬಗ್ಗೆ ಭಕ್ತರು ಸಂತಸಪಟ್ಟಿದ್ದಾರೆ. ಕುಟುಂಬ ಸಮೇತರಾಗಿ ಕೆಲವರು ಹರಕೆ ಒಪ್ಪಿಸಲೂ ಬಂದಿದ್ದಾರೆ. ಭಾರೀ ಸಂಖ್ಯೆಯಲ್ಲಿ ಭಕ್ತರು ಹರಿದು ಬರುತ್ತಿರೋ ಹಿನ್ನೆಲೆಯಲ್ಲಿ ಊಟದ ಛತ್ರದಲ್ಲಿ ಅನ್ನದಾನ ಆದಿತ್ಯವಾರದಿಂದಲೇ ಪ್ರಾರಂಭವಾಗಿದೆ.
ಊಟದ ಪಂಕ್ತಿಯಲ್ಲಿ 120ರ ಬದಲು 40 ಜನರಿಗಷ್ಟೇ ಅವಕಾಶ ನೀಡಲಾಗುತ್ತಿದೆ. ಊಟದ ವೇಳೆ ಪ್ರತಿ ಭಕ್ತರ ಮಧ್ಯೆ ನಾಲ್ಕು ಅಡಿ ಅಂತರ ಇರಿಸಿಕೊಳ್ಳಲಾಗುತ್ತಿದೆ. ಊಟದ ಸಾಲಿನಲ್ಲಿ 3 ಸಾವಿರ ಜನರ ಬದಲು 350 ಜನರಿಗಷ್ಟೇ ನಿಲ್ಲಲು ಸೂಚಿಸಲಾಗಿದೆ. ಅನ್ನಛತ್ರದ 225 ಜನರ ಸಿಬ್ಬಂದಿಯ ಪೈಕಿ ಶೇ. 50ರಷ್ಟು ಸಿಬ್ಬಂದಿಗಳು ಮಾತ್ರ ಅಲ್ಲಿನ ಕಾರ್ಯವನ್ನು ಮಾಡುತ್ತಿದ್ದಾರೆ.
ಸಿಬ್ಬಂದಿಗಳು ಅನ್ನಛತ್ರಕ್ಕೆ ಪ್ರವೇಶಿಸುವ ಮುನ್ನ ಕೈ, ಕಾಲು ಸ್ವಚ್ಚಗೊಳಿಸುವಂತೆ, ಮಾಸ್ಕ್ ಕಡ್ಡಾಯ ಹಾಕಿಕೊಳ್ಳುವಂತೆ ತಿಳಿಸಲಾಗಿದೆ. ಭಕ್ತರು ಅನ್ನಛತ್ರಕ್ಕೆ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ರೀನಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ.
ಸುಮಾರು ಎರಡೂವರೆ ತಿಂಗಳ ಬಳಿಕ ಧರ್ಮಸ್ಥಳದಲ್ಲಿ ಭಕ್ತರು ಮುಡಿ ಹರಕೆ ಒಪ್ಪಿಸುತ್ತಿದ್ದಾರೆ. ಭಾನುವಾರವೇ ಭಕ್ತರು ಆಗಮಿಸಿದ ಹಿನ್ನೆಲೆ ಮುಡಿ ಕೊಡುವ ಕಾರ್ಯ ನಡೆಯುತ್ತಿದೆ. ನೂರಾರು ಭಕ್ತರು ಕ್ಷೇತ್ರದಲ್ಲಿ ಹರಕೆ ಸಲ್ಲಿಸಿದ್ದಾರೆ. ಕ್ಷೌರಿಕರು ಸ್ಯಾನಿಟೈಝರ್ ಬಳಸಿ ಮಾಸ್ಕ್ ಧರಿಸಿ ಸುರಕ್ಷತಾ ಕ್ರಮಗಳೊಂದಿಗೆ ಮುಡಿ ತೆಗೆಯುತ್ತಿದ್ದಾರೆ.