ಮಂಗಳೂರು, ಜೂ.08 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಜೂನ್ 8 ರ ಸೋಮವಾರ ಬೆಳಿಗ್ಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದರು.
ಕದ್ರಿ ಮಂಜುನಾಥಸ್ವಾಮಿ ದರ್ಶನ ಪಡೆದ ಬಳಿಕ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿಯವರು, ಇಂದು ನಮಗೆ ಸಂತಸದ ದಿನ. ಬಾವುಕ ಭಕ್ತರು ದರ್ಶನ ಮಾಡಲು ಕಾಯುತ್ತಿದ್ದರು. ರಾಜ್ಯಾದ್ಯಂತ ಇಂದು ದೇವಸ್ಥಾನಗಳು ತೆರೆದಿವೆ. ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಮಾಡುತ್ತಿದ್ದಾರೆ. ನಾನು ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಮಂಜುನಾಥಸ್ವಾಮಿ ದರ್ಶನ ಪಡೆದಿದ್ದೇನೆ. ನಮ್ಮ ಇಲಾಖೆಯಿಂದ ಅವಕಾಶ ನೀಡಿದ್ದಕ್ಕೆ ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ.
ಕೊರೊನಾ ಲಾಕ್ಡೌನ್ ಹಿನ್ನಲೆ ಮಾರ್ಚ್ನಿಂದ ದೇವಾಲಯ, ಮಸೀದಿ, ಚರ್ಚ್ಗಳನ್ನು ಮುಚ್ಚಲಾಗಿದ್ದು ಜೂನ್ 8 ರಂದು ಕೆಲವೊಂದು ದೇವಾಲಯ, ಚರ್ಚು, ಮಸೀದಿಗಳು ಪುನಃ ತೆರೆಯಲಾಗಿದೆ.
ವಿಗ್ರಹಗಳು, ಕಂಬಗಳು, ಗೋಡೆಗಳು ಇತ್ಯಾದಿಗಳನ್ನು ಮುಟ್ಟಬಾರದು, ತೀರ್ಥ ಪ್ರಸಾದ ಹಂಚಬಾರದು ಎಂದು ದೇವಾಲಯಗಳಿಗೆ ಆದೇಶಿಸಲಾಗಿದ್ದು ಸಾಮಾಜಿಕ ಅಂತರದೊಂದಿಗೆ ಮುಗಗವಸು ಧರಿಸುವುದು ಕಡ್ಡಾಯವಾಗಿದೆ.
ಕದ್ರಿ ದೇವಾಲಯದಲ್ಲಿ ಸರ್ಕಾರದ ಸೂಚನೆಯಂತೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ಮುಂತಾದ ವ್ಯವಸ್ಥೆಗಳನ್ನು ಮಾಡಲಾಗಿದೆ.
ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮೇಯರ್ ದಿವಾಕರ್ ಪಾಂಡೇಶ್ವರ ಹಾಗೂ ಹಲವು ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು ದೇವಾಲಯಕ್ಕೆ ಭೇಟಿ ನೀಡಿದರು.