ಸುಬ್ರಹ್ಮಣ್ಯ, ಜೂ.08 (DaijiworldNews/MB) : ಕೊರೊನಾ ಲಾಕ್ಡೌನ್ ಬಳಿಕ ಸೋಮವಾರದಿಂದ ದೇವಾಲಯಗಳು ತೆರೆದಿದ್ದು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಆದಿ ಸುಬ್ರಹ್ಮಣ್ಯ ದೇವರ ದರ್ಶನವನ್ನು ನೂರಾರು ಭಕ್ತರು ಪಡೆಯುತ್ತಿದ್ದಾರೆ.
ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಮಾರ್ಚ್ನಿಂದ ಎಲ್ಲಾ ದೇವಾಲಯ, ಮಸೀದಿ, ಚರ್ಚ್ಗಳು ಮುಚ್ಚಲಾಗಿದ್ದು ಇಂದಿನಿಂದ ರಾಜ್ಯದಲ್ಲಿ ದೇವಾಲಯಗಳು, ಚರ್ಚ್, ಮಸೀದಿಗಳು ತೆರೆಯಲು ಅವಕಾಶ ನೀಡಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಬೆಳಿಗ್ಗೆ 8.30ರ ಮಹಾಪೂಜೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ಭಕ್ತಾಧಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್ ಬಳಸಿ, ಮಾಸ್ಕ್ ಹಾಕಿ ದೇವರ ದರ್ಶನ ಪಡೆದಿದ್ದಾರೆ. ದೇವರ ದರ್ಶನ ಹೊರತುಪಡಿಸಿ, ಯಾವುದೇ ಪೂಜೆ, ಸೇವೆ, ಪ್ರಸಾದಕ್ಕೆ ಅವಕಾಶವಿರಲಿಲ್ಲ.
ಇನ್ನು ಇಂದು ಬೆಳಿಗ್ಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಾಲಯಕ್ಕೂ ಭಕ್ತರು ಆಗಮಿಸಿದ್ದು ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಕೂಡಾ ದೇವರ ದರ್ಶನ ಪಡೆದರು.