ಮಂಗಳೂರು, ಜೂ. 08 (DaijiworldNews/SM): ಮೇ ೮ರ ಸೋಮವಾರದಿಂದ ರಾಜ್ಯಾದ್ಯಂತ ಧಾರ್ಮಿಕ ಕ್ಷೇತ್ರಗಳು ಓಪನ್ ಆಗಿದೆ. ಸುಮಾರು 77 ದಿನಗಳಿಂದ ಬಂದ್ ಆಗಿದ್ದ ದೇವಾಲಯಗಳು ಓಪನ್ ಆಗಿರುವ ಹಿನ್ನೆಲೆಯಲ್ಲಿ ಭಕ್ತರ ದಂಡು ದೇವರ ದರ್ಶನಕ್ಕೆ ದೌಡಾಯಿಸಿದ್ದಾರೆ. ತಮ್ಮ ನೆಚ್ಚಿನ ಕ್ಷೇತ್ರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಮೊದಲ ದಿನವೇ ಕರಾವಳಿಯ ಪ್ರಮುಖ ಕ್ಷೇತ್ರಗಳು ಭಕ್ತರಿಂದ ತುಂಬಿಕೊಂಡಿದ್ದವು.
ಧರ್ಮಸ್ಥಳದಲ್ಲಿ ಭಕ್ತ ಸಾಗರ:
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಸಾವಿರಾರು ಮಂದಿ ಭಕ್ತರ ದಂಡು ಹರಿದುಬಂದಿದೆ. ಎರಡು ತಿಂಗಳ ಬಳಿಕ ಭಕ್ತರಿಗೆ ಮಂಜುನಾಥ ಸ್ವಾಮಿ ದರ್ಶನ ನೀಡಿದ್ದಾರೆ. ಬೆಳಗ್ಗೆ 6.30ರಿಂದ ಮಂಜುನಾಥ ಸ್ವಾಮಿ ದರ್ಶನ ಆರಂಭಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ದೇವಸ್ಥಾನ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ಯಾನ್, ಸ್ಯಾನಿಟೈಝೇಷನ್ ಮಾಡಲಾಗಿದೆ. ಕ್ಷೇತ್ರದ ಸಿಬ್ಬಂದಿ ಮತ್ತು ಅರ್ಚಕರ ಥರ್ಮಲ್ ಸ್ಕ್ಯಾನ್ ಕಡ್ಡಾಯವಾಗಿದ್ದು, ಕೈಗಳಿಗೆ ಸ್ಯಾನಿಟೈಝರ್ ಮಾಡಿ ಅರ್ಚಕರು, ಸಿಬ್ಬಂದಿ ದೇವಸ್ಥಾನ ಪ್ರವೇಶ ಮಾಡಿದ್ದಾರೆ. ಕ್ಷೇತ್ರದ ಭದ್ರತಾ ಸಿಬ್ಬಂದಿ ಸೇರಿ ಎಲ್ಲರಿಗೂ ಮಾಸ್ಕ್, ಗ್ಲೌಸ್ ಮತ್ತು ಫೇಸ್ ಶೀಲ್ಡ್ ಕಡ್ಡಾಯವಾಗಿದೆ. ಜ್ವರ, ಕೆಮ್ಮು ಮುಂತಾದ ಅನಾರೋಗ್ಯ ಸ್ಥಿತಿಯಲ್ಲಿ ದರ್ಶನಕ್ಕೆ ಅವಕಾಶ ನೀಡಿಲ್ಲ.ಜೊತೆಗೆ ಕ್ಷೇತ್ರದಲ್ಲಿ ತೀರ್ಥ ಪ್ರಸಾದದ ಬದಲು ಗಂಧ ಪ್ರಸಾದವಷ್ಟೇ ನೀಡಲಾಗಿದೆ. ಕ್ಷೇತ್ರದಲ್ಲಿ ಎಲ್ಲಾ ರೀತಿಯ ಸೇವೆ ಆರಂಭಗೊಂಡಿದ್ದು, ಅನ್ನಛತ್ರ ಕೂಡಾ ಓಪನ್ ಆಗಿದೆ. ಸಾವಿರಾರು ಭಕ್ತರಿಂದ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮುಡಿ ಹರಕೆ ಸಲ್ಲಿಕೆಯಾಗಿದೆ. 110 ಕ್ಷೌರಿಕರು ಭಕ್ತರ ಮುಡಿ ತೆಗೆಯುವ ಕಾರ್ಯ ಮಾಡಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯನ ದರ್ಶನಕ್ಕೆ ಅವಕಾಶ:
ಕುಕ್ಕೆ ಸುಬ್ರಹ್ಮಣ್ಯದಲ್ಲೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಿಗ್ಗೆ 8.30ರ ಮಹಾಪೂಜೆಯ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಒಳ ಅಂಗಳದಲ್ಲಿ ಬಾಕ್ಸ್ ನಲ್ಲಿ ಭಕ್ತರು ಸಾಲುಗಟ್ಟಿ ನಿಂತ ಬಳಿಕ ಕೈಗೆ ಸ್ಯಾನಿಟೈಝರ್ ಹಾಕಿ ಥರ್ಮಲ್ ಸ್ಕ್ಯಾನ್ ಬಳಿಕ ದೇಗುಲದ ಒಳಗೆ ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ.
ಮಂಗಳೂರಿನ ದೇವಸ್ಥಾನಗಳು ಓಪನ್:
ಇನ್ನು ಮಂಗಳೂರು ನಗರದಾದ್ಯಂತ ಮೊದಲ ದಿನವೇ ದೇವಸ್ಥಾನಗಳು ತೆರೆದಿವೆ. ಮಂಗಳೂರಿನ ಕದ್ರಿ ಮಂಜುನಾಥಸ್ವಾಮಿ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಶರವು ಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇನ್ನು ಮುಜುರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಇಂದು ಬೆಳಗ್ಗೆ ಕದ್ರಿ ದೇಗುಲಕ್ಕೆ ಆಗಮಿಸಿ ದೇವರ ದರುಶನ ಪಡೆದಿದ್ಧಾರೆ.
ಸರತಿ ಸಾಲಲ್ಲಿ ನಿಂತು ಮೂಕಾಂಬಿಕೆ ದರ್ಶನ ಪಡೆದ ಭಕ್ತರು:
ಇನ್ನು ಕೊಲ್ಲೂರು ದೇಗುಲ ಕೂಡಾ ಇಂದು ತೆರೆದಿದ್ದು, 77 ದಿನಗಳ ಬಳಿಕ ಭಕ್ತರು ಮೂಕಾಂಬಿಕೆಯ ದರುಶನ ಪಡೆದರು. ಧ್ವಜಸ್ತಂಭದ ಎದುರುಗಡೆಯಿಂದ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದೇಗುಲದ ಒಳಗೆ ಪ್ರವೇಶ ನಿರಾಕರಣೆ ಮಾಡಲಾಗಿದೆ. ಆದರೂ ಬೆಳಗ್ಗೆಯಿಂದಲೇ ಭಕ್ತರ ದಂಡು ದೇವಾಲಯದತ್ತ ದೌಡಾಯಿಸಿದ್ದರು.
ಭಕ್ತರಿಗೆ ದರ್ಶನ ನೀಡಿದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿ:
ಇನ್ನು ಕರಾವಳಿಯ ಮತ್ತೊಂದು ಕಾರ್ನಿಕ ಕ್ಷೇತ್ರವೆಂದೇ ಗುರುತಿಸಿಕೊಂಡಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವೂ ಕೂಡ ಲಾಕ್ ಡೌನ್ ಸಂದರ್ಭದಲ್ಲಿ ಲಾಕ್ ಆಗಿತ್ತು. ಆದರೆ, ಇದೀಗ ಮತ್ತೆ ಶ್ರೀ ರಾಜರಾಜೇಶ್ವರಿ ದೇವಿ ಭಕ್ತರಿಗೆ ದರುಷನ ನೀಡುತ್ತಿದ್ದಾರೆ. ಪೊಳಲಿ ಕ್ಷೇತ್ರದತ್ತ ಕೂಡ ಭಕ್ತರು ತೆರಳುತ್ತಿದ್ದು, ಶ್ರೀ ದೇವಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.
ಶ್ರೀ ಕೃಷ್ಣ ಮಠ, ಕಟೀಲು ಕ್ಷೇತ್ರಗಳಲ್ಲಿ ಭಕ್ತರಿಗಿಲ್ಲ ದೇವರ ದರ್ಶನ:
ಇನ್ನು ಪ್ರಮುಖವಾಗಿ ಉಡುಪಿಯ ಕೃಷ್ಣ ಮಠ ಮತ್ತು ಕಟೀಲು ದೇಗುಲ ಇಂದು ತೆರೆದಿಲ್ಲ. ಅಗತ್ಯ ಕ್ರಮಗಳ ಬಳಿಕ ಮುಂದಿನ ದಿನಾಂಕವನ್ನು ಪ್ರಕಟಸಿಸೋದಾಗಿ ಆಡಳಿತ ಮಂಡಳಿ ತಿಳಿಸಿದೆ.
ಲಾಕ್ಡೌನ್ನಿಂದ ಲಾಕ್ ಆಗಿದ್ದ ದೇಗುಲಗಳ ಬಾಗಿಲುಗಳು 2 ತಿಂಗಳ ಬಳಿಕ ತೆರೆದಿದ್ದು ಭಕ್ತರು ದೇವರು ದರುಶನ ಪಡೆಯುವ ಭಾಗ್ಯ ಪಡೆಯುವಂತಾಗಿದೆ.