ಮಂಗಳೂರು, ಮಾ 29 : ಒಬ್ಬಾಕೆಯನ್ನು ಇಬ್ಬರು ಪ್ರೀತಿಸುತ್ತಿದ್ದು, ಕೊನೆಗೆ ಈ ಪ್ರೀತಿ ಕೊನೆಯಾಗಿದ್ದು, ಒಬ್ಬನ ಕೊಲೆಯಲ್ಲಿ. ನರಿಕೊಂಬು ಗ್ರಾಮದ ನಿವಾಸಿ ನಾರಾಯಣ ಎಂಬವರ ಪುತ್ರ ಯತೀಶ್ ತನ್ನ ಸ್ನೇಹಿತನ ಕೈಯಲ್ಲಿ ಹತ್ಯೆಗೆ ಒಳಗಾದ ಯುವಕ ಎಂದು ಗುರುತಿಸಲಾಗಿದೆ. ಆರೋಪಿ ಶಶಿಧರ್ನನ್ನು ಬಂಧಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯತೀಶ್ ತನ್ನ ಗೆಳೆಯನಾದ ಶಶಿಧರ ಎಂಬಾತನೊಂದಿಗೆ ಮಾ. 24ರಂದು ಸಂಜೆ 7.30ಕ್ಕೆ ಮನೆಯಿಂದ ಇನ್ನಿಪಡ್ಪುಗೆ ಕಬಡ್ಡಿ ನೋಡಲೆಂದು ಹೋಗಿದ್ದು, ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಈ ಬಗ್ಗೆ ಮಾ. 26ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಶಶಿಧರ ಹುಡುಗಿ ತನಗೆ ಸೇರಬೇಕು ಎಂದು ಬಯಸಿದ್ದ. ಇದಕ್ಕಾಗಿ ಯತೀಶ್ ನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದ . ಯತೀಶ್ ನನ್ನು ಒತ್ತಾಯಿಸಿ ಮಂಗಳೂರಿಗೆ ಕರೆತಂದಿದ್ದ. ಈ ಸಂದರ್ಭ ಬಹಳ ಅನ್ಯೋನ್ಯತೆಯಿಂದ ಇರುವಂತೆ ವರ್ತಿಸಿದ್ದ. ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ಯತೀಶ್ ನಿಗೆ ಕಂಠಪೂರ್ತಿ ಮಧ್ಯ ಕುಡಿಸಿದ್ದ. ರಾತ್ರಿ ಇಬ್ಬರೂ ಬಂದರು ಮೀನುಗಾರಿಕಾ ಧಕ್ಕೆ ಗೆ ಬಂದಿದ್ದಾರೆ ಅಲ್ಲಿ ಯಾರು ಇಲ್ಲದನ್ನು ಗಮನಿಸಿ ಶಶಿಧರ ಯತೀಶ್ ನನ್ನು ನೀರಿಗೆ ದೂಡಿ ಹಾಕಿ ಪರಾರಿಯಾಗಿದ್ದ. ಯತೀಶ್ ಮನೆಗೆ ಹಿಂತಿರುಗದ ಕಾರಣ ಆತನ ತಂದೆ ಅತ್ತಕಡೆ ನಾಪತ್ತೆ ದೂರು ದಾಖಲಿಸಿದ್ದರು.
ಇನ್ನೊಂದೆಡೆ ಬಂದರಿನಲ್ಲಿ ಮಾ. 26 ರಂದು ಶವ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಬಂದಿದೆ. ಪರಿಶೀಲನೆ ನಡೆಸಿದಾಗ ಇದು ನಾಪತ್ತೆಯಾಗಿದ್ದ ಯತೀಶನ ಶವ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಪ್ರಕರಣವನ್ನು ಬಂಟ್ವಾಳ ನಗರ ಠಾಣೆಗೆ ವರ್ಗಾಯಿಸಿದ್ದಾರೆ.