ಮಂಗಳೂರು,ಜೂ 9 (Daijiworld News/MSP): ಮಂಗಳೂರು ಸೆಂಟ್ರಲ್ ಮಾರ್ಕೆಟ್ ಬಿಕ್ಕಟ್ಟು ಪಾಲಿಕೆ ಅಧಿಕಾರಿಗಳ ಮತ್ತು ಸಗಟು ವ್ಯಾಪಾರಸ್ಥರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಂಗಳೂರು ಸೆಂಟ್ರಲ್ ಮಾರ್ಕೆಟ್ ಬೈಕಂಪಾಡಿಯಲ್ಲಿರುವ ಎಪಿಎಂಸಿ ಯಾರ್ಡ್ ಗೆ ಎರಡೂವರೆ ತಿಂಗಳ ಹಿಂದೆ ಸ್ಥಳಾಂತರ ಗೊಂಡಿದ್ದ ಸಗಟು ವ್ಯಾಪಾರಸ್ಥರು ಇದೀಗ ಜೂ. 9ರಿಂದ ಮತ್ತೆ ಮಂಗಳೂರು ಸೆಂಟ್ರಲ್ ಮಾರ್ಕೆಟ್ನಲ್ಲಿಯೇ ವ್ಯಾಪಾರ ಮುಂದುವರಿಸಲು ತೀರ್ಮಾನಿಸಿ ವ್ಯಾಪಾರಕ್ಕೆ ಸಿದ್ದತೆ ನಡೆಸಿದ್ದಾರೆ. ಆದರೆ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದ ಪಾಲಿಕೆ ಅಧಿಕಾರಿಗಳ ಮಧ್ಯೆ ಹಾಗೂ ವ್ಯಾಪಾರಸ್ಥರ ಮದ್ಯೆ ಮಾತಿನ ಚಕಮಕಿ ನಡೆದಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಬಾಳಿಕೆ ಮುಗಿದಿರುವ ಬಗ್ಗೆ, ಅದನ್ನು ಕೆಡವು ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ಹಾಗೂ ಎನ್ಐಟಿಕೆ ವರದಿ ನೀಡಿವೆ. ಸೆಂಟ್ರಲ್ ಮಾರ್ಕೆಟ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಾಲಿಕೆ ಈಗಾಗಲೇ ತಿಳಿಸಿತ್ತು.
ಪಾಲಿಕೆ ಆದೇಶ ಉಲ್ಲಂಘಿಸಿ ಮತ್ತೆ ಕೇಂದ್ರ ಮಾರುಕಟ್ಟೆ ತೆರೆಯಲು ಒಂದೆಡೆ ವ್ಯಾಪಾರಿಗಳು ಸಿದ್ದತೆ ಮಾಡಿಕೊಂಡಿದ್ರೆ , ಕಾನೂನು ಮೀರಿ ವ್ಯಾಪಾರಕ್ಕೆ ಮುಂದಾದರೆ , ಅಂತ ವ್ಯಾಪಾರಿಗಳ ಲೈಸೆನ್ಸ್ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಅಯುಕ್ತ ಅಜಿತ್ ಕುಮಾರ್ ಶಾನಾಡಿ ಎಚ್ಚರಿಕೆ ನೀಡಿದ್ದಾರೆ.