ಉಡುಪಿ, ಜೂ.09 (DaijiworldNews/MB) : ಮಹಾರಾಷ್ಟ್ರದಿಂದ ಮರಳಿದವರನ್ನು ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ಗೆ ಒಳಗಾಗಬೇಕಿಲ್ಲ. 14 ದಿನಗಳ ಕಾಲವೂ ಹೋಂ ಕ್ವಾರಂಟೈನ್ಗೆ ಒಳಗಾಗಬೇಕು. ಈ ಸಂದರ್ಭದಲ್ಲಿ ಮನೆಯನ್ನೇ ಸೀಲ್ಡೌನ್ ಮಾಡಲಾಗುವುದು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಈ ಬಗ್ಗೆ ಜೂನ್ 9 ರ ಮಂಗಳವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಬಂದು ಹೋಂ ಕ್ವಾರಂಟೈನ್ಗೆ ಒಳಗಾಗುವ ವ್ಯಕ್ತಿಯ ಮನೆಯನ್ನು ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗುವುದು. ವ್ಯಕ್ತಿಯು 14 ದಿನಗಳ ಕಾಲ ಮನೆಯಲ್ಲೇ ಇರಬೇಕು. ಮನೆಯಿಂದ ಹೊರಬಂದಲ್ಲಿ ಮೊಕದ್ದಮೆ ದಾಖಲಿಸಿಲಾಗುವುದು. ಈ ನಿರ್ಧಾರ ರಾಜ್ಯ ಮಟ್ಟದಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರದಿಂದ ಮರಳಿದ ವ್ಯಕ್ತಿಯ ಮನೆಯು ಅಪಾರ್ಟ್ಮೆಂಟ್ನಲ್ಲಿ ಇದ್ದಲ್ಲಿ ಸಂಪೂರ್ಣ ಅಪಾರ್ಟ್ಮೆಂಟ್ನ್ನು ಸೀಲ್ಡೌನ್ ಮಾಡಲಾಗುವುದಿಲ್ಲ. ಬದಲಾಗಿ ವ್ಯಕ್ತಿ ವಾಸಿಸುವ ನಿವಾಸವನ್ನು ಮಾತ್ರ ಸೀಲ್ಡೌನ್ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಆಯಾ ಜಿಲ್ಲೆಯ ಮೇಲೆ ಸಂಪೂರ್ಣ ಅಧಿಕಾರವನ್ನು ಜಿಲ್ಲಾಧಿಕಾರಿಗೆ ನೀಡಲಾಗಿದೆ ಎಂದೂ ಕೂಡಾ ಈ ಸಂದರ್ಭದಲ್ಲಿ ಹೇಳಿದರು.
ನಾವು ಪೊಲೀಸ್ ಸಿಬ್ಬಂದಿ ಮತ್ತು ಗೃಹರಕ್ಷಕರನ್ನು ನೇಮಿಸುತ್ತೇವೆ. ಹಾಗೆಯೇ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕವು ಕ್ವಾರಂಟೈನ್ಗೆ ಒಳಗಾದವರ ಮೇಲೆ ಗಮನವಿರಿಸಲಾಗುವುದು. ಸ್ಥಳೀಯರು ಕ್ವಾರಂಟೈನ್ಗೆ ಒಳಗಾದವರನ್ನು ಮನೆಯಿಂದ ಹೊರ ಹೋದದ್ದನ್ನು ಗಮನಿಸಿದ್ದಲ್ಲಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಇನ್ನು ಕ್ವಾರಂಟೈನ್ಗೆ ಒಳಗಾಗಿರುವ ವ್ಯಕ್ತಿಯ ಕುಟುಂಬವು ತೀರಾ ಬಡವರಾಗಿದ್ದಲ್ಲಿ ನಾವು ದೇವಾಲಯದ ಮೂಲಕ ಕಿಟ್ ನೀಡುತ್ತೇವೆ. ಅವರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.