ಮಾ, 28 : 2012ರಲ್ಲಿ ಸ್ವಾತ್ ಕಣಿವೆಯಲ್ಲಿ ಶಾಲೆಗೆ ಹೋಗುತ್ತಿದ್ದ ತಾಲಿಬಾನ್ಗಳ ಗುಂಡಿನ ದಾಳಿಗೆ ಒಳಗಾಗಿ ತನ್ನ ತವರು ನೆಲ ತೊರೆದಿದ್ದ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲ ಯೂಸಫ್ ಝಾಯಿ ಆರು ವರ್ಷಗಳ ಬಳಿಕ ತನ್ನ ದೇಶಕ್ಕೆ ವಾಪಾಸಾಗಿದ್ದಾರೆ. 20 ವರ್ಷದ ಮಲಾಲ ನಿನ್ನೆ ಲಂಡನ್ನಿಂದ ಇಸ್ಲಾಮಾಬಾದ್ನ ಬೆನಜಿರ್ ಭುಟ್ಟೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ತದನಂತರ ಭಾರಿ ಭದ್ರತೆಯೊಂದಿಗೆ ಅವರನ್ನ ಮನೆಗೆ ಕಳುಹಿಸಿ ಕೊಡಲಾಗಿದೆ. ಈ ಬಗ್ಗೆ ಪಾಕಿಸ್ತಾನದ ಖಾಸಗಿ ಚಾನೆಲ್ ದೃಶ್ಯಾವಳಿಯೊಂದನ್ನು ಬಿತ್ತರಿಸಿದ್ದು, ಮಲಾಲ ಅವರು ಇಸ್ಲಮಾಬಾದ್ ವಿಮಾನ ನಿಲ್ದಾಣವನ್ನು ಇಳಿದು ತಮ್ಮ ಕುಟುಂಬದೊಂದಿಗೆ ಬೆಂಗಾವಲು ಪಡೆಯ ಕಾರಿನತ್ತ ಬರುತ್ತಿರುವ ದೃಶ್ಯದ ತುಣುಕುಗಳು ಇವೆ. ತನ್ನ ಹೋರಾಟದಿಂದಲೇ ವಿಶ್ವವ್ಯಾಪಿ ಖ್ಯಾತಿ ಗಳಿಸಿದ್ದ ಮಲಾಲಗೆ 2014ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ನೀಡಿ ಗೌರವಿಸಲಾಗಿತ್ತು. ಹೆಣ್ಣು ಮಕ್ಕಳ ಶಿಕ್ಷಣ ಹಕ್ಕಿಗೆ ಹೋರಾಟ ನಡೆಸುತ್ತಿದ್ದ ಮಲಾಲ ತಾಲಿಬಾನ್ಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
2012 ರಲ್ಲಿ ಶಾಲಾ ವಾಹನದಲ್ಲಿ ಶಾಲೆ ಮುಗಿಸಿ ಮನೆಗೆ ಪ್ರಯಾಣಿಸುವಾಗ ಬಸ್ ತಡೆಗಟ್ಟಿದ ಉಗ್ರರ ತಂಡವು ಮಲಾಲ ಮೇಲೆ ಗುಂಡು ಹಾರಿಸಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ಗ್ರೇಟ್ ಬ್ರಿಟನ್ನಲ್ಲಿ ಚಿಕಿತ್ಸೆ ಕೊಡಿಸಿ ಅಲ್ಲಿಯೇ ಉಳಿಯಲು ಹಾಗೂ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇನ್ನು ಮಲಾಲರ ರಕ್ಷಣೆಗಾಗಿ ಅವರ ತವರು ದೇಶದ ಪ್ರವಾಸದ ಮಾಹಿತಿಯನ್ನು ಬಹಳ ಗೌಪ್ಯವಾಗಿ ಇಡಲಾಗಿದೆ ಮಾಧ್ಯಮಗಳು ವರದಿ ಮಾಡಿವೆ.