ಉಡುಪಿ, ಜೂ 9 (Daijiworld News/MSP):: ರಾಜ್ಯ ಸರ್ಕಾರವು ಅನುಮತಿ ನೀಡಿದರೂ, ಭಕ್ತಾದಿಗಳ ಆರೋಗ್ಯ ಹಾಗೂ ಸುರಕ್ಷತೆಗೆ ಗರಿಷ್ಠ ಆದ್ಯತೆಯನ್ನು ನೀಡಿ, ಉಡುಪಿ ಜಿಲ್ಲೆಯ ಮೂರೂ ತಾಲ್ಲೂಕುಗಳಲ್ಲಿರುವ ಯಾವುದೇ ಚರ್ಚ್ನಲ್ಲಿ ಜೂನ್ 30 ರವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆಗಳು ನಡೆಸದಿರಲು ನಿರ್ಧರಿಸಲಾಗಿದೆ ಎಂದು ಉಡುಪಿಯ ಧರ್ಮಾಧ್ಯಕ್ಷರಾದ ಡಾ| ಜೆರಾಲ್ಡ್ ಲೋಬೊ ತಿಳಿಸಿದ್ದಾರೆ.
ಉಡುಪಿ ಕಥೋಲಿಕ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಡುಪಿ ಕಥೋಲಿಕ ಧರ್ಮಪ್ರಾಂತ, ಚರ್ಚ್ ಆಫ್ ಸೌತ್ ಇಂಡಿಯ (ಸಿಎಸ್ಐ), ಯುನೈಟೆಡ್ ಬಾಸೆಲ್ ಮಿಷನ್ ಚರ್ಚಸ್ (ಯುಬಿಎಂ), ಫುಲ್ ಗೊಸ್ಪೆಲ್ ಪಾಸ್ಟರ್ಸ್ ಅಸೋಸಿಯೇಶನ್ ಹಾಗೂ ಇತರ ಕ್ರೈಸ್ತ ಸಭೆಗಳ ಧಾರ್ಮಿಕ ನಾಯಕರು ಸಮ್ಮುಖದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಾಮೂಹಿಕ ಪೂಜೆ, ಪ್ರಾರ್ಥನೆ ನಡೆಯದಿದ್ದರೂ, ಮುಂಜಾಗರೂಕತೆಯ ಕ್ರಮಗಳನ್ನು ಪಾಲಿಸುವ ಭಕ್ತಾದಿಗಳ, ವೈಯಕ್ತಿಕ ಭೇಟಿ ಹಾಗೂ ಪ್ರಾರ್ಥನೆಗಾಗಿ ಚರ್ಚ್ಗಳು ತೆರೆದಿರುತ್ತವೆ ಎಂದು ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಉಡುಪಿ ಯುನಾಯ್ಟೆಡ್ ಕ್ರಿಶ್ಚನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ.
ಕೊರೊನಾ ನಿಯಂತ್ರಣಕ್ಕಾಗಿ ಕಳೆದ 70 ದಿನಗಳಿಂದ ಯಾವುದೇ ಸಾಮೂಹಿಕ ಧಾರ್ಮಿಕ ಚಟುವಟಿಕೆಯಿಲ್ಲದೆ ಮುಚ್ಚಲ್ಪಟ್ಟಿದ್ದ ಚರ್ಚ್ಗಳನ್ನು ಜೂನ್ 8 ರಿಂದ ತೆರೆಯುವ ಆದೇಶವನ್ನು ಸರಕಾರವು ನೀಡಿದೆ. ಜನಹಿತಕ್ಕಾಗಿ ಈ ನಿರ್ಧಾರವನ್ನು ಪ್ರಕಟಿಸಿದ ಕರ್ನಾಟಕ ರಾಜ್ಯ ಸರಕಾರಕ್ಕೆ ಕೃತಜ್ಞತೆಗಳು. ಇನ್ನು ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ ಬೆರಳೆಣಿಕೆಯಷ್ಟು ಕೊರೋನ ಪೀಡಿತರ ಸಂಖ್ಯೆ ಇದ್ದು, ಹಸಿರು ವಲಯ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ ಕಳೆದ ಎರಡು-ಮೂರು ವಾರಗಳಲ್ಲಿ ಕೊರೋನ ಪೀಡಿತರ ಸಂಖ್ಯೆ ಶೀಘ್ರವಾಗಿ ಹೆಚ್ಚಾಗಿ ಇದೀಗ ಸಾವಿರದ ಆಸುಪಾಸಿನಲ್ಲಿದೆ ಮಾತ್ರವಲ್ಲ, ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ತಲುಪಿದೆ. ಜೂನ್ 30 ರ ವೇಳೆಗೆ , ಕೋವಿದ್-19 ಸೋಂಕಿನ ಪರಿಸ್ಥಿತಿಯನ್ನು ಪುನರ್-ಪರಿಶೀಲನೆ ಮಾಡಿ, ಮುಂದಿನ ವ್ಯವಸ್ಥೆಯ ಬಗ್ಗೆ ನಿರ್ಧರಿಸುವುದಾಗಿ ಸಭೆಯ್ ಬಳಿಕ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೋವಿದ್-19 ಸೋಂಕು ಇನ್ನೊಬ್ಬರಿಗೆ ತಗುಲದಂತೆ ಗರಿಷ್ಠ ಪ್ರಮಾಣದಲ್ಲಿ ಎಚ್ಚರಿಕೆ ವಹಿಸುವುದು, ನಾವು ಪರರಿಗೆ ತೋರಿಸುವ ಪ್ರೀತಿ ಹಾಗೂ ಕಾಳಜಿಯ ಗುರುತು ಎಂದು ಕ್ರೈಸ್ತ ಧಾರ್ಮಿಕ ಮುಖಂಡರು ಒತ್ತಿ ಹೇಳಿದ್ದಾರೆ.