ಬೆಳ್ತಂಗಡಿ, ಜೂ 9 (Daijiworld News/MSP): ಅಕ್ರಮ ಮರಳುಗಾರಿಕೆಯಿಂದ ರಸ್ತೆ ಹದೆಗೆಟ್ಟಿರುವುದನ್ನು ನಾಗರಿಕರು ಡಿಸಿ ಮುಂದೆ ಪ್ರತಿಭಟಿಸಿದ ಘಟನೆ ಚಾರ್ಮಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಫರ್ಲಾಣಿಯಲ್ಲಿ ಮೃತ್ಯುಂಜಯ ನದಿಯಿಂದ ಅಕ್ರಮ ಮರಳುಗಾರಿಕೆ ನಡೆಸುವುದರಿಂದ ಚಾರ್ಮಾಡಿ-ಫರ್ಲಾಣಿ ರಸ್ತೆ ಸಂಪರ್ಕ ಹದಗೆಟ್ಟಿದೆ. ಫರ್ಲಾಣಿ ಎಂಬಲ್ಲಿ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಪರವಾನಿಗೆ ಯಲ್ಲಿ ಮರಳುಗಾರಿಕೆ ನಡೆಸಲಾಗುತ್ತಿದ್ದು, ರಸ್ತೆ ಹದಗೆಟ್ಟಿದೆ.ಊರವರು ಮರಳು ಸಾಗಾಟಗಾರರಲ್ಲಿ ಹಲವು ಬಾರಿ ಚರಲ್ ಹಾಕಿ ರಸ್ತೆ ದುರಸ್ತಿ ಪಡಿಸಲು ತಿಳಿಸಿದ್ದರು.ರಸ್ತೆ ದುರಸ್ತಿ ಪಡಿಸದೇ ನಿರಂತರ ಹಿಟಾಚಿ, ಟಿಪ್ಪರ್,ಲಾರಿಗಳ ಮೂಲಕ ಮರಳು ಸಾಗಾಟ ನಡೆಸುತ್ತಿದ್ದು, ರಸ್ತೆ ಇನ್ನಷ್ಟು ಹಾಳಾದ ಕಾರಣ ಗ್ರಾಮಸ್ಥರು ಲಾರಿ ಗಳನ್ನು ತಡೆಹಿಡಿದು ಪ್ರತಿಭಟನೆ ನಡೆಸಿದರು.
ತಾಲೂಕು ಭೇಟಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ರಸ್ತೆ ದುರಸ್ತಿ ಪಡಿಸಿ ಮರಳುಗಾರಿಕೆ ಮುಂದುವರಿಸುವಂತೆ ಆದೇಶಿಸಿದರು .ಜಿಲ್ಲಾಧಿಕಾರಿಗಳ ಆದೇಶದಂತೆ ಮರಳು ಸಾಗಾಟಗಾರರು ಕೂಡಲೇ ರಸ್ತೆ ದುರಸ್ತಿಗೆ ಮುಂದಾದರು. ಬೆಳ್ತಂಗಡಿ ತಾ.ತಹಶೀಲ್ದಾರ್ ಗಣಪತಿ ಶಾಸ್ತ್ರಿ,ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಶಿವ ಪ್ರಸಾದ್ ಅಜಿಲ ಚಾರ್ಮಾಡಿ ಗ್ರಾಮ ಪಂಚಾಯತ್ ಪಿ.ಡಿ.ಒ. ಪ್ರಕಾಶ್ ಶೆಟ್ಟಿ ನೊಚ್ಚ ಇದ್ದರು. ಪ್ರತಿಭಟನೆಯಲ್ಲಿ ಕೃಷ್ಣ ಭಟ್,ಗೋಪಾಲಕೃಷ್ಣ, ಪ್ರಕಾಶ್ ಹೊಸಮಠ,ಸುರೇಶ್ ಮಾರಂಗಾಯಿ,ರವಿಚಂದ್ರ ಹಾಗೂ ಊರವರು ಭಾಗವಹಿಸಿದ್ದರು.