ಮಂಗಳೂರು, ಜೂ 9 (Daijiworld News/MSP): ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಬಿಜೆಪಿ ವಕ್ತಾರ ರವಿಶಂಕರ್ ಮಿಜಾರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಮೂಡಾದಿಂದ ಜನರಿಗೆ ನೀಡಲಾಗುವ ಏಕ ನಿವೇಶನ, ವಿನ್ಯಾಸ ಅನುಮೋದನೆ, ಭೂ ಪರಿವರ್ತನೆ, ವಲಯ ದೃಢೀಕರಣ ಸಹಿತ ಎಲ್ಲ ಸೇವೆಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಲು ಆದ್ಯತೆ ನೀಡಲಾಗುವುದು ಎಂದರು
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಮಹಾ ಯೋಜನೆ -2ರ ಅವಧಿ 2021ಕ್ಕೆ ಪೂರ್ಣವಾಗಲಿದೆ. ಮಹಾ ಯೋಜನೆ-3ರ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಈ ಯೋಜನೆಯನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ಮಂಗಳೂರು ನಗರದ ಮುಂದಿನ 30 ವರ್ಷದ ಬೆಳವಣಿಗೆ ಗಮನದಲ್ಲಿರಿಸಿ ಮಹಾ ಯೋಜನೆ-3ರ ಸಿದ್ಧತೆ ನಡೆದಿದೆ ಎಂದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮೊಕ್ತೇಸರರಾಗಿರುವ ಆಗಿರುವ ರವಿಶಂಕರ್ ಅವರು ಅಧಿಕಾರ ಸ್ವೀಕಾರದ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಭೇಟಿಯಿತ್ತು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭ ಕ್ಷೇತ್ರದ ಅಧ್ಯಕ್ಷ ಹೆಚ್,ಎಸ್ ಸಾಯಿರಾಮ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್, ಪಾಲಿಕೆ ಸದಸ್ಯ ಕಿರಣ್ ಕೋಡಿಕಲ್ ಮುಂತಾದವರು ಉಪಸ್ಥಿತರಿದ್ದರು.