ಮಂಗಳೂರು, ಜೂ 10 (Daijiworld News/MSP): ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಡೀಲ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡನೇ ರೈಲ್ವೆ ಅಂಡರ್ಪಾಸ್ ಶೀಘ್ರವೇ ಉದ್ಘಾಟನೆಗೊಂಡು ಇನ್ನೇನು ಸಾರ್ವಜನಿಕ ಬಳಕೆ ಮುಕ್ತವಾಗುದರಲ್ಲಿತ್ತು. ಆದರೆ ಅದಕ್ಕೂ ಮೊದಲೇ, ರಸ್ತೆಯ ಮಧ್ಯದಲ್ಲಿ ಒಂದು ದೊಡ್ಡ ಹೊಂಡ ನಿರ್ಮಾಣವಾಗಿದೆ. ಒಂದು ವೇಳೆ ಅಂಡರ್ಪಾಸ್ ಉದ್ಘಾಟಿಸಿದ ಬಳಿಕ ವಾಹನಗಳು ಅದರ ಮೇಲೆ ಹಾದುಹೋಗುವಾಗ ರಸ್ತೆಯಲ್ಲಿ ಈ ರೀತಿ ಹೊಂಡ ನಿರ್ಮಾಣವಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸಿತ್ತು.
ಕಳೆದ ಎರಡು ವರ್ಷಗಳಿಂದ ಅಂಡರ್ಪಾಸ್ನ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದ್ದು ಇನ್ನೇನು ಎರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಹೀಗಾಗಿ ಉದ್ಘಾಟನೆಯ ಸಿದ್ದತೆಗಾಗಿ ಕಾಮಗಾರಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿತ್ತು. ಅಂತಿಮ ಹಂತದಲ್ಲಿ ರೋಲರ್ ನಲ್ಲಿ ರಸ್ತೆ ಮೇಲ್ಮೈಯನ್ನು ಸಮತಟ್ಟುಗೊಳಿಸುವ ವೇಳೆ ಡಾಮರು ಕುಸಿದು ಸ್ತೆಯಲ್ಲಿ ಸುಮಾರು ಮೂರು ಅಡಿ ಆಳದ ಬೃಹತ್ ಹೊಂಡ ನಿರ್ಮಾಣವಾಗಿದೆ. ಅಂಡರ್ ಪಾಸ್ ನ ಒಳಗಡೆ ಒಳಚರಂಡಿ ಹಾದುಹೋಗುವಿಕೆಯನ್ನು ಗಮನಿಸದೆ ನಡೆಸಿದ ರಸ್ತೆ ಕಾಮಗಾರಿಗಳ ನಡೆಸಿದರ ಪರಿಣಾಮ ರಸ್ತೆ ಕುಸಿತವಾಗಿದೆ ಎಂದು ಹೇಳಲಾಗಿದೆ.
ರಸ್ತೆಯಲ್ಲಿ ಕುಸಿತ ಉಂಟಾಗಿರುವುದರಿಂದ ಇನ್ನೇನು ಅಂಡರ್ಪಾಸ್ನ ಉದ್ಘಾಟನೆ ಮುಂದೂಡಲ್ಪಟ್ಟಿದೆ. ಇದೀಗ, ಸಮಸ್ಯೆಯ ಮೂಲವನ್ನು ಕಂಡುಹಿಡಿಯಲು ರಸ್ತೆಯನ್ನು ಅಗೆಯಬೇಕಾಗಿದ್ದು, ಆ ಬಳಿಕ, ಒಳಚರಂಡಿ ಮೇಲೆ ಚಪ್ಪಡಿಗಳನ್ನು ಸರಿಪಡಿಸಿ ಮತ್ತೆ ಡಾಮರು ಕಾಮಗಾರಿ ನಡೆಸಬೇಕಾಗುತ್ತದೆ. ಮಳೆಗಾಲ ಈ ಎಲ್ಲ ಕಾಮಗಾರಿಗೆ ತೊಡಕಾಗಿ ಪರಿಣಮಿಸಬಹುದು.
ರಾಷ್ಟ್ರೀಯ ಹೆದ್ದಾರಿ 75 ರ ಪಡೀಲ್ ನಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಅಂಡರ್ಪಾಸ್ ನಿರ್ಮಾಣವಾಗುತ್ತಿದೆ. ಇನ್ನುಕಾಮಗಾರಿ ನಿರ್ವಹಿಸಿದವರು ಯಾರು ಎಂಬ ಬಗ್ಗೆ ಗೊಂದಲವಿದೆ. ರೈಲ್ವೆ ಅಧಿಕಾರಿಗಳು ಈ ಕೆಲಸವನ್ನು ನಿರ್ವಹಿಸಿದ್ದಾರೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ತಿಳಿಸಿದರೆ ರೈಲ್ವೇ ಇಲಾಖೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇದನ್ನು ಮಾಡಿದೆ ಎಂದು ಪರಸ್ಪರ ಬೊಟ್ಟು ಮಾಡಿ ಘಟನೆಯಿಂದ ಜಾರಿಗೊಳ್ಳುತ್ತಿದ್ದಾರೆ.