ಕಾಪು, ಜೂ 10 (Daijiworld News/MSP): ಕಾಪು-ಪಡು ಗ್ರಾಮದ ರಾಮನಗರ ಎಂಬಲ್ಲಿ ಅನಾದಿಕಾಲದಿಂದಲೂ ಸುತ್ತಮುತ್ತಲಿನ ಗ್ರಾಮದ ಮಳೆ ನೀರು ಹರಿದು ಸಮುದ್ರಕ್ಕೆ ಸೇರಿಸುವ ಸುಮಾರು ಹದಿಮೂರು ಅಡಿ ಅಗಲದ ಕಾಲುವೆಯೊಂದನ್ನು ಅತಿಕ್ರಮಿಸಿ ರಸ್ತೆ ನಿರ್ಮಾಣ ಮಾಡಲು ಹೊರಟಿರುವ ಸ್ಥಳೀಯ ಶಾಸಕರ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿದ್ದು, ಕಾಮಗಾರಿ ನಡೆಸದಂತೆ ತಡೆಯೊಡ್ಡಿದ ಘಟನೆ ಮಂಗಳವಾರ ಘಟಿಸಿದೆ.
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾಪು ಶಾಸಕ ಲಲಾಜಿ ಮೆಂಡನ್ ಅವರ ರೈತ ವಿರೋಧಿ ನಿಲುವಿಗೆ ಸೊರಕೆ ಖಂಡನೆ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಕೃಷಿಕರು ಈ ಭಾಗದ ಹೊಲಗಳಲ್ಲಿ ತಮ್ಮ ಕೃಷಿ ಚಟುವಟಿಕೆಯನ್ನು ನಡೆಸುತ್ತಿದ್ದು, ಕಾಲುವೆ ಕಿರಿದುಗೊಳಿಸಿದಲ್ಲಿ ತಮ್ಮ ಕೃಷಿ ಭೂಮಿಯೇ ಮುಳುಗಿ ಹೋಗಿ ಬೆಳೆದ ಫಸಲು ನಾಶವಾಗಿ, ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದೆಂಬ ಆತಂಕವನ್ನು ಶಾಸಕ ಲಾಲಾಜಿಯವರಲ್ಲಿ ತೋಡಿಕೊಂಡಿದ್ದರೂ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂತ್ರಸ್ತರ ಮನವಿಯ ಮೇರೆಗೆ ವಿವಾದಿತ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ಭೇಟಿ ನೀಡಿ ಸ್ಥಳೀಯ ನಾಗರಿಕರ ಸಮಸ್ಯೆಯನ್ನು ಆಲಿಸಿದರು. ಸಾರ್ವಜನಿಕರಿಗೆ ಬೇಡವಾದ ಕಾಮಗಾರಿಯನ್ನು ನಡೆಸಲು ಶಾಸಕರು ಅತಿ ಮುತುವರ್ಜಿ ತೋರಿಸುತ್ತಿದ್ದಾರೆ. ಶಾಸಕರ ಸ್ವಂತ ಜಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕಾಗಿ ಬಡ ರೈತಾಪಿ ಜನರ ಬಾಳಿಗೆ ಕೊಳ್ಳಿಯಿಟ್ಟರೆಂದು ಸ್ಥಳೀಯರು ಆಕ್ರೋಶಿತರಾದರು.
ಈ ಸಂದರ್ಭ ಸೊರಕೆ ಮಾಧ್ಯಮದೊಂದಿಗೆ ಮಾತನಾಡಿ, ಬಹುತೇಕ ಜನರು ಕೃಷಿಯನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ರೈತಾಪಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ಶಾಸಕರ ರೈತ ವಿರೋಧಿ ನಿಲುವು ಖಂಡನೀಯ. ಈ ಅನಧಿಕೃತ ರಸ್ತೆ ನಿರ್ಮಾಣ ಕಾಮಗಾರಿಯು ನಮ್ಮ ಗಮನಕ್ಕೆ ಬಂದಾಗ ಜಿಲ್ಲಾಧಿಕಾರಿಯವರಿಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದು, ಸ್ಥಳೀಯರ ವಿರೋಧವಿರುವುದರಿಂದಾಗಿ ಮತ್ತು ಕೃಷಿ ಭೂಮಿ ನಾಶವಾಗುವ ಪ್ರಮೇಯ ಉಂಟಾಗುವುದರಿಂದಾಗಿ ಈ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದ್ದೇವೆ. ಯಾವುದೇ ಲಾಬಿಗೆ ಮಣಿದು, ರಸ್ತೆ ನಿರ್ಮಾಣ ಮಾಡಿದ್ದೇ ಆದಲ್ಲಿ, ಪ್ರಸ್ತುತ ಇರುವ ಕಾಲುವೆಯ ಒಂದು ಅಡಿ ಅಗಲ ಕಿರಿದುಗೊಳಿಸಿದರೂ ಸ್ಥಳೀಯ ಜನರೊಂದಿಗೆ ಕಾಂಗ್ರೆಸ್ ಪಕ್ಷವು ಕೂಡ ಸೇರಿಕೊಂಡು ತೀವ್ರ ಪ್ರತಿಭಟನೆಯನ್ನು ನಡೆಸಲಿದೆಯೆಂದು ಎಚ್ಚರಿಕೆಯನ್ನು ನೀಡಿದರು.
ಜನ ಪ್ರತಿನಿಧಿಗಳು ಜನಪರ ನಿಲುವನ್ನು ಹೊಂದಿರಬೇಕು ವಿನಃ ಸ್ವಾರ್ಥಕ್ಕಾಗಿ ಅಥವಾ ಯಾವುದೋ ಲಾಭಕ್ಕಾಗಿ ಜನರನ್ನು ಬಲಿಪಶು ಮಾಡಬಾರದು. ಕಾಲುವೆ ಅತಿಕ್ರಮಿಸಿ ರಸ್ತೆ ನಿರ್ಮಾಣ ಮಾಡಿದರೆ ಆ ಪರಿಸರದ ಜನರ ಬದುಕು ಏನಾಗಬಹುದೆಂಬ ಯೋಚನೆ ಶಾಸಕರಿಗೆ ಇದ್ದಂತಿಲ್ಲ. ಬಡ ರೈತಾಪಿ ಜನರ ಬದುಕುವ ಹಕ್ಕನ್ನು ಕಸಿದು ಕೊಳ್ಳದೆ, ಜೀವನ ನಡೆಸಲು ಅವಕಾಶ ಕಲ್ಪಿಸಬೇಕೆಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಆಗ್ರಹಿಸಿದರು.
ಸ್ಥಳದಲ್ಲಿ ಪುರಸಭೆಯ ಸದಸ್ಯರಾದ ಕೆ. ಎಚ್.ಉಸ್ಮಾನ್, ಶಾಂತಲತಾ ಎಸ್. ಶೆಟ್ಟಿ, ಅಶ್ವಿನಿ, ಇಮ್ರಾನ್, ನಾಗೇಶ್ ಸುವರ್ಣ, ಮತ್ತು ಸ್ಥಳೀಯ ಕೃಷಿಕರಾದ ಶೇಖರ್ ಶೆಟ್ಟಿ, ರಘುರಾಮ ಶೆಟ್ಟಿ, ಸುಗಂಧಿ ರೈ, ಸಂತೋಷ್ ಶೆಟ್ಟಿ, ಅಶೋಕ್ ಶೆಟ್ಟಿ, ಸುವಾಸಿನಿ, ಸುರೇಶ್ ಪೂಜಾರಿ, ಗೀತಾ ಶೆಟ್ಟಿ, ಸರೋಜಿನಿ, ವಿಜಯಾ, ಪೂರ್ಣಿಮಾ, ಕೃ? ಆಚಾರಿ, ಮತ್ತು ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.