ಬೆಳ್ತಂಗಡಿ,ಜೂ 10 (Daijiworld News/MSP): ಕೊರೊನಾ ಲಾಕ್ಡೌನ್ ಹಲವು ರೀತಿಯ ಹೊಸ ಅನ್ವೇಷಣೆಗಳಿಗೂ ಕಾರಣವಾಗಿರುವ ಸುದ್ದಿ ಅಲ್ಲೊಂದು, ಇಲ್ಲೊಂದು ಕಾಣಿಸಿಕೊಳ್ಳುತ್ತಲೇ ಇದೆ. ಇದಕ್ಕೆ ಹೊಸ ಸೇರ್ಪಡೆ ಉಜಿರೆಯಂತಹ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ’ಎಸ್. ಡಿ. ಎಂ ಪಾಲಿಟೆಕ್ನಿಕ್’ ಕಾಲೇಜಿನ ಅಂಗಳದಿಂದ ಬಂದಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಹೊಸ ಅನ್ವೇಷಣೆಗಳಿಗೆ ಪ್ರೇರೇಪಣೆ ನೀಡುವ ಪ್ರಾಧ್ಯಾಪಕ ಬಳಗ ಎಲ್ಲರೂ ಸುಲಭವಾಗಿ ಬಳಸಬಹುದಾದ ’ಅಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್’ಗಳನ್ನು ತಯಾರಿಸಿದೆ. ವಿಶೇಷ ಅಂದ್ರೆ ಇದು ಮಾರುಕಟ್ಟೆ ಬೆಲೆಗಿಂತ ಅತ್ಯಂತ ಕಡಿಮೆ ದರದಲ್ಲಿ ಸಿದ್ಧಪಡಿಸಲಾಗಿದ್ದು, ಜನಸಾಮಾನ್ಯರಿಗೆ, ಸಂಘ-ಸಂಸ್ಥೆಗಳಿಗೆ ಹೀಗೆ ಎಲ್ಲರಿಗೂ ಬಳಕೆಗೆ ಯೋಗ್ಯವಾಗಿದೆ.
ಈ ಅನ್ವೇಷಣೆಯ ಹಿಂದಿರುವುದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಬಿ. ಯಶೋವರ್ಮ ಅವರ ಮಾರ್ಗದರ್ಶನ. ಮತ್ತು ಉಜಿರೆಯ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದ ಕಾರ್ಯವೈಖರಿ. ಇವರ ಪ್ರಯತ್ನದಿಂದ ಈ ಅಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸೆರ್ ತಯಾರಿಸಲಾಗಿದೆ.
ಈ ಅನ್ವೇಷಣೆಗೆ ಪ್ರೇರಣೆಯಾಗಿದ್ದು ಏನು ಎಂಬುದರ ಕುರಿತು ಪ್ರಶ್ನಿಸಿದಾಗ, ಕಾಲೇಜಿನ ಪ್ರಾಂಶುಪಾಲರಾದ ಕೆ. ಪಿ. ಪ್ರಸಾದ್ ಹೇಳುವುದು ಹೀಗೆ. ’ಕೋರೋನಾ ವೈಯಕ್ತಿಕ ಸ್ವಚ್ಛತೆ ಮತ್ತು ಕಾಳಜಿಯನ್ನು ಎಲ್ಲರಿಗೂ ಕಲಿಸಿದೆ. ಶಿಕ್ಷಣ ಸಂಸ್ಥೆಗಳಂತಹ ಕೇಂದ್ರಗಳಲ್ಲಿ ಹ್ಯಾಂಡ್ ಸ್ಯಾನಿಟೈಸೇಷನ್ಗೆ ಪೂರಕವಾಗಿ ಸ್ಯಾನಿಟೈಸರ್ಗಳ ಬಳಕೆಗೆ ಮಾರ್ಗಸೂಚಿಗಳೂ ಬಂದಿವೆ. ಆದರೆ ವಿದ್ಯಾರ್ಥಿಗಳು ಬೃಹತ್ ಪ್ರಮಾಣದಲ್ಲಿ ಸೀಮಿತ ಸ್ಯಾನಿಟೈಸರ್ಗಳನ್ನು ಬಳಸುವ ವೇಳೆ ಬಾಟಲ್ಗಳನ್ನು ಮುಟ್ಟುವ ಪ್ರಸಂಗ ಬರಬಹುದು. ಇದೂ ಅಪಾಯಕಾರಿ. ಇದಕ್ಕಾಗಿ ತಂತ್ರಜ್ಞಾನ ಬಳಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಿದಾಗ ’ಅಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್’ಗಳನ್ನು ಬಳಸುವ ಕುರಿತು ಯೋಚನೆ ಬಂತು. ಈ ಕುರಿತು ಮಾರುಕಟ್ಟೆಗಳಲ್ಲಿ ವಿಚಾರಿಸಿದಾಗ ೬ ಸಾವಿರಕ್ಕಿಂತ ಕಡಿಮೆ ಬೆಲೆಯ ಯಾವುದೇ ಅಟೋಮ್ಯಾಟಿಕ್ ಡಿಸ್ಪೆನ್ಸರ್ಗಳು ಲಭ್ಯವಿರಲಿಲ್ಲ. ಹೀಗಾಗಿ ಕಡಿಮೆ ಖರ್ಚಿನಲ್ಲಿ ಇಂತಹ ಯಂತ್ರಗಳನ್ನು ನಿರ್ಮಿಸಿದರೆ ಎಲ್ಲರಿಗೂ ಅನುಕೂಲ ಎಂಬ ಯೋಚನೆ ಬಂತು. ಈ ಕುರಿತು ಪ್ರಾಧ್ಯಾಪಕರಲ್ಲಿ ಚರ್ಚಿಸಿ ಅದಕ್ಕೆ ಸೂಕ್ತ ವಿನ್ಯಾಸ, ಸರ್ಕ್ಯೂಟ್, ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಿ ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಯಂತ್ರವೊಂದನ್ನು ನಿರ್ಮಿಸಲಾಯಿತು. ಇದನ್ನು ಬಳಸಿ, ಪರೀಕ್ಷಿಸಿದ ನಂತರ ಇದರ ಕಾರ್ಯವೈಖರಿ ಅತ್ಯಂತ ಸುಲಭವಾಗಿರುವ ಕಾರಣ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಶಾಲಾ-ಕಾಲೇಜುಗಳಿಗೆ ನೀಡುವ ಸಲಹೆ ನೀಡಿದ್ದು ಕಾರ್ಯದರ್ಶಿಗಳಾದ ಡಾ. ಬಿ. ಯಶೋವರ್ಮ ಅವರು. ಅದರಂತೆ ಈಗ ಒಟ್ಟು 15 ಅಟೋಮ್ಯಾಟಿಕ್ ಹ್ಯಾಂಡ್ ಸ್ಯಾನಿಟೈಸರ್ ಡಿಸ್ಪೆನ್ಸರ್ಗಳನ್ನು ನಿರ್ಮಿಸಿ ವಿತರಿಸಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಕಾಲಿನಿಂದ ಬಳಸುವ ಡಿಸ್ಪೆನ್ಸರ್ಗಳು ಲಭ್ಯವಿದ್ದರೂ ಬಳಕೆಯ ದೃಷ್ಟಿಯಿಂದ ಒಂದಷ್ಟು ಅನನುಕೂಲಗಳಿವೆ. ಹೀಗಾಗಿ ಸರಿಸುಮಾರು ಅದೇ ದರದಲ್ಲಿ ಈ ಸಂಪೂರ್ಣ ಸ್ವಯಂಚಾಲಿತ ಡಿಸ್ಪೆನ್ಸರ್ ನಿರ್ಮಿಸಿರುವುದು ಬಳಕೆದಾರರಿಗೂ ಅನುಕೂಲವಾಗುತ್ತದೆ.
ಈ ಯಂತ್ರದ ತಾಂತ್ರಿಕ ಕಾರ್ಯವೈಖರಿ ಅತ್ಯುನ್ನತ ಮಟ್ಟದ್ದು. ಇದೊಂದು ವಿದ್ಯುತ್ ಚಾಲಿತ ಯಂತ್ರವಾಗಿದ್ದು, ಅಲ್ಟ್ರಾಸಾನಿಕ್ ಸೆನ್ಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಯಂತ್ರದ ನಿರ್ದಿಷ್ಟ ಭಾಗದಲ್ಲಿ ಕೈಯನ್ನು ಹಿಡಿದಾಗ, ಇದರಲ್ಲಿರುವ ಸೆನ್ಸರ್ಗಳು ಚಲನೆಯನ್ನು ಗುರುತಿಸಿ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಕೈಗಳಿಗೆ ಸಿಂಪಡಿಸುತ್ತದೆ. ಹೀಗಾಗಿ ಯಾರೊಬ್ಬರೂ ಈ ಯಂತ್ರವನ್ನು ಮುಟ್ಟುವ ಪ್ರಮೇಯವೇ ಇಲ್ಲ. ಇದು ಯಂತ್ರದ ಸುರಕ್ಷಿತ ಬಳಕೆಯನ್ನು ಪ್ರಮಾಣೀಕರಿಸುತ್ತದೆ.
ಹೆಚ್ಚಿನ ವಿದ್ಯಾರ್ಥಿಗಳು, ನೌಕರರು ಇರುವ ಸಂಸ್ಥೆಗಳಲ್ಲಿ ಹಾಗೂ ಸಾರ್ವಜನಿಕ ಸೇವಾ ಸ್ಥಳಗಳಲ್ಲಿ ಸ್ಯಾನಿಟೈಸರ್ ಬಾಟಲಿಯನ್ನು ಅನೇಕ ಮಂದಿ ಸ್ಪರ್ಶಿಸುವುರಿಂದ ಕೊರೊನಾ ಸೋಂಕು ಹರಡಬಹುದಾದ ಆತಂಕವನ್ನು ನಿವಾರಿಸಲು ಈ ಯಂತ್ರವು ಸಹಕಾರಿಯಾಗಿದೆ. ಈ ಯಂತ್ರವು ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗುವುದರ ಜೊತೆಗೆ ಅವರಲ್ಲಿ ಹೊಸ ಅನ್ವೇಷಣೆಗಳ ಮೂಲಕ ಬಳಕೆದಾರ ಸ್ನೇಹಿ ಯಂತ್ರಗಳ ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಮೂಡುವಂತೆ ಮಾಡಿದೆ.
ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು ತಯಾರಿಸಿದ ಪ್ರಥಮ ಅಟೋಮ್ಯಾಟಿಕ್ ಸ್ಯಾನಿಟೈಸರ್ ಡಿಸ್ಪೆನ್ಸರ್ ಯಂತ್ರವನ್ನು ಧರ್ಮಸ್ಥಳಕ್ಕೆ ಅರ್ಪಿಸಲಾಗಿದೆ. ಇದನ್ನು ಪರೀಕ್ಷಿಸಿದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿ ಮತ್ತಷ್ಟು ಅನ್ವೇಷಣೆಗಳನ್ನು ನಡೆಸಲು ಪ್ರೋತ್ಸಾಹಿಸಿದ್ದು ನಮಗೆ ಹುಮ್ಮಸ್ಸು ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.