ಉಡುಪಿ, ಜೂ 10 (DaijiworldNews/SM): ಸಾಮಾಜಿಕ ಜಾಲತಾಣದಲ್ಲಿ ಜಿಲ್ಲಾಡಳಿತ ಮತ್ತು ಕೊವಿಡ್ ಚಿಕಿತ್ಸೆಯ ಕುರಿತಾಗಿ ಸುಮ್ಮನೆ ಊಹಾಪೋಹಗಳನ್ನು ಹರಿಯಬಿಟ್ಟಲ್ಲಿ ಸೊಂಕು ನಿಯಂತ್ರಣ ಕಾಯ್ದೆಯಡಿಯಲ್ಲಿ ಕೇಸು ದಾಖಲು ಮಾಡಿ ಅಂತಹವರ ವಿರುದ್ದ ಕಠಿಣ ಕ್ರಮ ಜರಗಿಸುತ್ತೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಜಿಲ್ಲಾಡಳಿತ ಕೊವಿಡ್ ರೋಗಿಗಳ ಚಿಕಿತ್ಸೆಗೆ ಸುಮಾರು 3.5 ಲಕ್ಷ ಪಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದರ ವಿರುದ್ದ ಗುಡುಗಿದ ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತಕ್ಕೆ ಒಂದೇ ಒಂದು ರುಪಾಯಿ ಚಿಕಿತ್ಸೆಗಾಗಿ ಎಲ್ಲಿಂದಲೂ ಬರುವುದಿಲ್ಲ. ಡಾ.ಟಿಎಂಎ ಪೈ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲಾ ಕೊವಿಡ್ ಹಾಸ್ಪಿಟಲ್ ಗಳಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಇಷ್ಟರವರೆಗೆ ಗುಣಮುಖರಾದ ರೋಗಿಗಳಿಂದ ಒಂದೇ ಒಂದು ರುಪಾಯಿಯನ್ನು ಜಿಲ್ಲಾಡಳಿತ ಪಡೆದಿಲ್ಲ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಏನು ಬರೆದು ಹಾಕಿದರೂ ನಡೆಯುತ್ತದೆ ಎಂದುಕೊಂಡಿದ್ದಾರೆ. ಇದನ್ನು ಮುಂದುವರೆಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಎಚ್ಚರಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 947 ಮಂದಿಗೆ ಪಾಸಿಟಿವ್ ಬಂದಿದೆ ಇವರಿಂದ ಯಾವುದೇ ಹಣವನ್ನು ಪಡೆದಿಲ್ಲ. ಡಾ. ಟಿಎಂಎ ಪೈ ಆಸ್ಪತ್ರೆಯಲ್ಲಿ ಕೂಡಾ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇಂತಹ ಸಂಸ್ಥೆಗಳ ಹೆಸರನ್ನು ತೆಗೆಯುವ ಮುನ್ನ ಎಚ್ಚರವಾಗಿರಿ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.