ಪುತ್ತೂರು, ಜೂ 11 (Daijiworld News/MSP): ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಕಬಾಬ್ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೃತ ದೇಹ ಜೂ.11ರ ಗುರುವಾರ ಪುತ್ತೂರು ಉಪ್ಪಿನಂಗಡಿ ರಸ್ತೆಯ ಪಡೀಲ್ ನ ಸರಕಾರಿ ಬಾವಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ನಂದಿಲ ನಿವಾಸಿ ವಿಠಲ ನಾಯ್ಕ್ (63) ಎಂದು ಗುರುತಿಸಲಾಗಿದೆ. ಇವರು ಪಡೀಲು ಸಮೀಪ ಹಲವಾರು ಸಮಯಗಳಿಂದ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಚಿಕನ್ ಕಬಾಬ್ ವ್ಯಾಪಾರ ನಡೆಸುತ್ತಿದ್ದರು.
ಆದರೆ ಕೊರೊನಾ ಲಾಕ್ ಡೌನ್ ನಿಂದ ವ್ಯಾಪಾರ ಸಂಪೂರ್ಣ ನಿಂತುಹೋಗಿತ್ತು. ಲಾಕ್ಡೌನ್ ಸಡಿಲಿಕೆ ಬಳಿಕ ಮತ್ತೆ ವ್ಯಾಪಾರ ಮುಂದುವರಿಸಿದ್ದರೂ ಅಷ್ಟೊಂದು ವ್ಯಾಪಾರವಾಗುತ್ತಿರಲಿಲ್ಲ ಹಾಗೂ ಈ ಮದ್ಯೆ ಅನಾರೋಗ್ಯವೂ ಅವರನ್ನು ಕಾಡಿತ್ತು ಎನ್ನಲಾಗಿದೆ.
ಜೂ.10ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಮನೆಯಿಂದ ಹೊರ ಹೋದವರು ಬಳಿಕ ಹಿಂತಿರುಗಿರಲಿಲ್ಲ. ಮನೆ ಮಂದಿ ಪರಿಸರದಲ್ಲಿ ಹಡುಕಾಡಿದರೂ ಪತ್ತೆಯಾಗಿರಲಿಲ್ಲ. ಜೂ. 11ರಂದು ಪಡೀಲು ಸರಕಾರಿ ಬಾವಿಯ ಕಟ್ಟೆಯಲ್ಲಿ ಚಪ್ಪಲಿ ಮತ್ತು ವೇಸ್ಟಿಯೊಂದನ್ನು ಕಂಡ ಕೆಲವರು ಸಂಶಯ ವ್ಯಕ್ತಪಡಿಸಿ ಬಾವಿಯನ್ನು ನೋಡಿದಾಗ ವ್ಯಕ್ತಿಯೊಬ್ಬರ ಮೃತ ದೇಹ ಬಾವಿಯಲ್ಲಿರುವುದು ಪತ್ತೆಯಾಗಿತ್ತು.
ಪೊಲೀಸರಿಗೆ ಮಾಹಿತಿ ದೊರಕಿ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಮೃತದೇಹ ಮೇಲೆತ್ತಿದ್ದಾರೆ. ಪೊಲೀಶರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರನನ್ನು ಅಗಲಿದ್ದಾರೆ.