ಮಂಗಳೂರು, ಜೂ. 11 (DaijiworldNews/SM): ಕಾಸರಗೋಡು-ದ.ಕ. ಜಿಲ್ಲೆಗಳ ಗಡಿಗಳ ಮೂಲಕ ಸಂಚಾರ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಲಪಾಡಿಯ ಮೂಲಕ ನಿತ್ಯ ಸಂಚಾರದ ಪಾಸ್ ಬಳಸಿಕೊಂಡು ತೆರಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಉಳಿದ ಗಡಿ ಭಾಗದ ಜನ ಮಾತ್ರ ಅತಂತ್ರರಾಗಿದ್ದಾರೆ. ದ.ಕ. ಜಿಲ್ಲೆಯಿಂದ ಕಾಸರಗೋಡು ಜಿಲ್ಲೆ ಸಂಪರ್ಕಿಸುವ ಸುಮಾರು 21ಕ್ಕೂ ಅಧಿಕ ಗಡಿಗಳಿದ್ದು, ಈ ಭಾಗಗಳಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಜನ ಕಂಗೆಟ್ಟಿದ್ದಾರೆ.
ಕಾಸರಗೋಡು-ದ.ಕ. ಜಿಲ್ಲೆಗಳಿಗೆ ಉದ್ಯೋಗಿಗಳಿಗೆ ತೆರಳಲು ಅವಕಾಶ ಕಲ್ಪಿಸಿ ಉಭಯ ಜಿಲ್ಲೆಗಳ ಜಿಲ್ಲಾಡಳಿತಗಳು ಆದೇಶ ನೀಡಿವೆ. ಆದರೆ, ನಿತ್ಯ ಸಂಚಾರದ ಪಾಸ್ ಬಳಸಿಕೊಂಡು ಮಾತ್ರವೇ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಸಮರ್ಪಕವಾದ ದಾಖಲೆಗಳಿದ್ದರಷ್ಟೇ ಅವುಗಳನ್ನು ಪರಿಶೀಲಿಸಿದ ಬಳಿಕ ತಲಪಾಡಿ ಗಡಿಯ ಮೂಲಕ ಮಾತ್ರವೇ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಉಳಿದ ಗಡಿ ಭಾಗಗಳ ಬಗ್ಗೆ ಯಾವುದೇ ಉಲ್ಲೇಖವಾಗಲಿ, ಆದೇಶವಾಗಲಿ ಹೊರಬಿದ್ದಿಲ್ಲ.
ಇತರ ಪ್ರಮುಖ ಗಡಿ ಪ್ರದೇಶಗಳು:
ಇನ್ನು ಪ್ರಮುಖವಾಗಿ ಉಳಿದ ಗಡಿ ಪ್ರದೇಶಗಳಿರುವುದು ಗ್ರಾಮಾಂತರ ಪ್ರದೇಶಗಳಲ್ಲಿ.
ವಿಟ್ಲದಿಂದ ಸಾರಡ್ಕ ಮೂಲಕ ಪೆರ್ಲ, ಬದಿಯಡ್ಕಕ್ಕೆ ಸಂಚಾರ
ಸುಳ್ಯದಿಂದ ಜಾಲ್ಸೂರು ಮೂಲಕ-ಮುಳ್ಳೇರಿಯ ಬದಿಯಡ್ಕ ಕಾಸರಗೋಡಿಗೆ ಪ್ರಯಾಣ
ಪುತ್ತೂರಿನಿಂದ ಪಾಣಾಜೆ ಮೂಲಕ ಪೆರ್ಲ್, ಬದಿಯಡ್ಕಕ್ಕೆ ಸಂಚಾರ
ಮುಡಿಪು-ಬಾಕ್ರಬೈಲು ಮೂಲಕ ಮಂಜೇಶ್ವರಕ್ಕೆ ಪ್ರಯಾಣ
ಮಂಜೇಶ್ವರ-ಆನೆಕಲ್ಲು-ಕನ್ಯಾನ ಮೂಲಕ ವಿಟ್ಲಕ್ಕೆ ಪ್ರಯಾಣ
ವಿಟ್ಲ-ಕುದ್ದುಪದವು-ಪೆರುವಾಯಿ ಮೂಲಕ ಉಪ್ಪಳಕ್ಕೆ ಪ್ರಯಾಣ
ಇವಿಷ್ಟೇ ಅಲ್ಲದೆ ಹಲವು ಪ್ರದೇಶಗಳಲ್ಲಿ ಕೇರಳ ಕರ್ನಾಟಕ ಗಡಿ ಪ್ರದೇಶಗಳಿವೆ. ಆದರೆ, ಈ ಭಾಗಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆ ಭಾಗದಲ್ಲಿರುವವರಿಗೆ ಉದ್ಯೋಗ ಸ್ಥಳ, ಆಸ್ಪತ್ರೆ, ಇನ್ನಿತರ ಕಡೆಗಳಿಗೆ ತೆರಳಲು ಅವಕಾಶವಿಲ್ಲದೆ ಕಂಗೆಟ್ಟಿದ್ದಾರೆ.
ಸದ್ಯದ ನಿಯಮ ಪ್ರಕಾರ ತಲಪಾಡಿ ಮೂಲಕ ಮಾತ್ರವೇ ಸಂಚಾರಕ್ಕೆ ಅವಕಾಶವಿದೆ. ಆದರೆ, ಸುಳ್ಯದ ಗಡಿ ಭಾಗದಿಂದ ಮುಳ್ಳೇರಿಯಾಕ್ಕೆ ಕೆಲಸಕ್ಕೆ ತೆರಳುವವರು, ಪುತ್ತೂರು-ಬಂಟ್ವಾಳ-ಮಂಗಳೂರು-ತೊಕ್ಕೊಟ್ಟು-ತಲಪಾಡಿ ದಾಟಿ ಕುಂಬಳೆ-ಬದಿಯಡ್ಕ ಮಾರ್ಗವಾಗಿ ಕೆಲಸಕ್ಕೆ ತೆರಳಲು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗಿದೆ. ನೇರವಾಗಿ ಉನ್ನುವುದನ್ನು ತಲೆಗೆ ಸುತ್ತು ಬಳಸಿ ಉಂಡಂತಹ ಪರಿಸ್ಥಿತಿಗೆ ಬಂದು ತಲುಪಿದ್ದಾರೆ ಗ್ರಾಮಾಂತರ ಪ್ರದೇಶದ ಜನತೆ. ನೂರಾರು ಕಿ.ಲೋ. ಮೀಟರ್ ಸುತ್ತಿ ಬಳಸಿ ಕೇರಳದಿಂದ ಕರ್ನಾಟಕಕ್ಕೆ ಹಾಗೂ ಕರ್ನಾಟಕದಿಂದ ಕೇರಳಕ್ಕೆ ನಿತ್ಯ ತೆರಳಲು ಸಾಧ್ಯವೇ ಇಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜನತೆ ಸಿಲುಕಿಕೊಂಡಿದ್ದಾರೆ.
ಇತರ ಗಡಿ ಭಾಗಗಳ ಸಮಸ್ಯೆ ಏನು?
ತಲಪಾಡಿ ಹೊರತು ಪಡಿಸಿ ಇತರ ಗಡಿ ಭಾಗಗಳಲ್ಲಿ ಜನರ ಪರದಾಟ ಗಡಿ ಬಂದ್ ಮಾಡಿರುವುದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಡಿ ಭಾಗಗಳಲ್ಲಿರುವ ಜನ ಕರ್ನಾಟಕದಿಂದ ಕೇರಳಕ್ಕೆ ವ್ಯವಹಾರಕ್ಕೆ ತೆರಳುತ್ತಾರೆ. ಗಡಿ ಭಾಗಗಳಲ್ಲಿರುವವರು ಪಟ್ಟಣಕ್ಕೆ ತೆರಳಲು ೧೦ರಿಂದ ೨೦ ಕಿ.ಮೀ. ಸಂಚಾರ ನಡೆಸಬೇಕು. ಹಲವಾರು ಮಂದಿ ಗಡಿ ದಾಟಿ ಕೇರಳದಲ್ಲಿ ತಮ್ಮ ವ್ಯವಹಾರ ವಹಿವಾಟಿಗೆ ತೆರಳುತ್ತಾರೆ. ಅಲ್ಲದೆ ಹಲವಾರು ಮಂದಿ ಕರ್ನಾಟಕದವರು ಕೇರಳದಲ್ಲಿ ಅಂಗಡಿಗಳನ್ನು ಹೊಂದಿದ್ದಾರೆ. ಆದರೆ, ಗಡಿಬಂದ್ ಮಾಡಿದ ಬಳಿಕ ಅವರಿಗೆ ಸಂಕಷ್ಟ ಎದುರಾಗಿದೆ.
ದ.ಕ. ಜಿಲ್ಲೆಯ ಜನ ಈ ಎಲ್ಲಾ ಭಾಗಗಳಿಂದ ಕೇರಳದಲ್ಲಿ ವ್ಯವಹಾರ ಹೊಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಅಧಿಕವಾಗಿ ಕೇರಳಕ್ಕೆ ಕೆಲಸಕ್ಕೆ ತೆರಳುತ್ತಾರೆ. ಈ ಎಲ್ಲಾ ಗಡಿ ಭಾಗದವರಿಗೆ ವ್ಯವಹಾರಕ್ಕೆ ಹತ್ತಿರದ ಪ್ರದೇಶ ಕೇರಳವಾಗಿದೆ. ಒಂದೆರಡು ಕಿಲೋ ಮೀಟರ್ ಸಂಚರಿಸಿದರೆ ವ್ಯವಹಾರ ಸ್ಥಳಕ್ಕೆ ತೆರಳಲು ಸಾಧ್ಯವಿದೆ. ಆದರೆ, ಲಾಕ್ ಡೌನ್ ನಿಂದ ಇದಕ್ಕೆ ಯಾವುದೇ ಅವಕಾಶ ಇಲ್ಲ. ಸದ್ಯದ ನಿತ್ಯ ಪಾಸ್ ಬಳಸಿ ಸಂಚರಿಸಲು ಕೂಡ ಆಗುತ್ತಿಲ್ಲ. ಗ್ರಾಮೀಣ ಭಾಗದಿಂದ ತಲಪಾಡಿಗೆ ಬಂದು ಮತ್ತೆ ಕೇರಳಕ್ಕೆ ತೆರಳಲು ಸಾಧ್ಯವೇ? ಎನ್ನುವ ಪ್ರಶ್ನೆಯನ್ನು ಸ್ಥಳೀಯ ನಿವಾಸಿಗಳು ಮುಂದಿಟ್ಟಿದ್ದಾರೆ.
ನಾಲ್ಕಾರು ಕಿ.ಮೀ. ಬದಲು ನೂರಾರು ಕಿ.ಮೀ. ಸಂಚಾರ ಸಾಧ್ಯವೇ? ಎನ್ನುವುದು ಗಡಿ ಭಾಗಗಲ್ಲಿರುವವರ ಪ್ರಶ್ನೆಯಾಗಿದೆ. ಎಲ್ಲಾ ಗಡಿ ಭಾಗಗಳನ್ನು ಮಣ್ಣು ಹಾಕಿ ಬಂದ್ ಮಾಡಲಾಗಿದೆ. ಇತರ ಪ್ರಮುಖ ಗಡಿ ಭಾಗಗಳಲ್ಲಿ ಸಂಚಾರಕ್ಕೆ ಅವಕಾಶ ನೀಡಿ ಎಂಬ ಆಗ್ರಹಗಳು ಕೇಳಿಬರುತ್ತಿದ್ದು, ಗಡಿ ಭಾಗಗಳಲ್ಲಿ ಸಂಕಷ್ಟಕ್ಕೀಡಾದವರು ಮನವಿ ಮಾಡುತ್ತಿದ್ದಾರೆ. ಆದರೆ, ಈ ಭಾಗದ ಜನರ ನೋವಿಗೆ, ಸಂಕಟಕ್ಕೆ ಸ್ಪಂದನೆ ಇಲ್ಲದಂತಾಗಿದೆ. ಈ ಭಾಗದವರು ಕೇರಳ ಅಥವಾ ಕರ್ನಾಟಕಕ್ಕೆ ಸದ್ಯ ಬರಬೇಕಾದರೆ ಸುತ್ತು ಬಳಸಬೇಕಾದ ಅನಿವಾರ್ಯತೆ ಇರುವಂತಹದು. ನೂರಾರು ಕಿಲೋ ಮೀಟರ್ ಸಂಚಾರ ನಡೆಸಿ ತೆರಳಬೇಕಾಗಿದ್ದು, ದ.ಕ. ಜಿಲ್ಲಾಡಳಿತ ಇತರ ಗಡಿ ಭಾಗದಲ್ಲಿರುವ ಸಂಕಷ್ಟಕ್ಕೆ ಸಿಲುಕಿದವರಿಗೆ ಧ್ವನಿಯಾಗಬೇಕಾಗಿದೆ.