ಮೈಸೂರು, ಮಾ 30: ನಾನು ಹೋದಲೆಲ್ಲಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶಾ ಹಿಂಬಾಲಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಅಮಿತ್ ಶಾ ಎಲ್ಲಿಗೆ ಬೇಕಾದರೂ ಹೋಗಲಿ. ಮಠಕ್ಕೂ ಹೋಗಲಿ. ಅದು ಅವರ ವೈಯಕ್ತಿಕ ಸ್ವಾತಂತ್ರ್ಯ. ಅವರು ಹೋಗುವ ಬಗ್ಗೆ ನಾನೂ ಏನನ್ನು ಹೇಳುವುದಿಲ್ಲ. ಆದರೆ ನಾನು ಹೋದಲೆಲ್ಲಾ ಶಾ ಹಿಂಬಾಲಿಸುತ್ತಿದ್ದಾರೆ. ನನ್ನ ಕಂಡರೆ ಅಮಿತ್ ಶಾಗೆ ಭಯ ಎಂದು ಹೇಳಿದ್ದಾರೆ.
ಅಮಿತ್ ಶಾ ಜೈನ ಧರ್ಮದವರು. ನನ್ನನ್ನು ಅವರು ಅಹಿಂದು ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಮೊದಲು ಅಮಿತ್ ಶಾ ಅವರು ಹಿಂದೂವೇ ಅಥವಾ ಅಹಿಂದುವೇ ಎಂದು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಉದ್ಬೂರು ಗ್ರಾಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯವಾಗಿ ನನಗೆ ಮರು ಜನ್ಮ ಕೊಟ್ಟ ಕ್ಷೇತ್ರ ಚಾಮುಂಡೇಶ್ವರಿ. ಹೀಗಾಗಿ ಕೊನೆಯ ಚುನಾವಣೆಯನ್ನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಎದುರಿಸುತ್ತೇನೆ. ಈ ಬಾರಿಯೂ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಮತ್ತು ಇದು ನನ್ನ ಕೊನೆಯ ಚುನಾವಣೆಯಾಗಿದೆ. ನಾನು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಕಿವಿಗೊಡಬೇಡಿ. ನೂರಕ್ಕೆ ನೂರರಷ್ಟು ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.