ಮಂಗಳೂರು, ಜೂ12 (DaijiworldNews/MSP): ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ಜನವರಿಯಲ್ಲಿ ಆರೋಪಿ ಆದಿತ್ಯ ರಾವ್ ಬಾಂಬ್ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯನ್ನು ಗುರುವಾರ ನಗರದ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ.
ತನಿಖಾ ಪ್ರಕ್ರಿಯೆ ಎಪ್ರಿಲ್ ನಲ್ಲಿ ಮುಕ್ತಾಯಗೊಂಡು 700 ಪುಟಗಳ ಆರೋಪಪಟ್ಟಿಯನ್ನು ರಾಜ್ಯ ಸರ್ಕಾರದ ಅನುಮತಿಗಾಗಿ ಕಳುಹಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರದ ಗೃಹ ಇಲಾಖೆಯ ಕಾರ್ಯದರ್ಶಿಗಳಿಂದ ಪೂರ್ವಾನುಮತಿ ಪತ್ರ ಬಂದಿದ್ದು, ಅದರಂತೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ತನಿಖಾಧಿಕಾರಿ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು ಬೆಳ್ಳಿಯಪ್ಪ ಮಾಹಿತಿ ನೀಡಿದ್ದಾರೆ.
ಆದಿತ್ಯ ರಾವ್ ವಿರುದ್ದ ಕಾನೂನು ಬಾಹಿರ ಚಟುವಟಿಗಳ ತಡೆ ಕಾಯ್ದೆ (ಯುಎಪಿಎ )ಅನ್ವಯ ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಿದ್ದಪಡಿಸಲಾಗಿದೆ. ಆರೋಪಿಯು ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ್ದ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆತ ಇರಿಸಿದ್ದ ಬ್ಯಾಗಿನಲ್ಲಿದ್ದ ವಸ್ತುಗಳು ಸ್ಪೋಟಕಗಳೇ ಆಗಿವೆ ಎನ್ನುವುದು ಎಪ್ ಎಸ್ ಎಲ್ ಟೆಸ್ಟ್ ನಿಂದ ಸಾಬೀತಆಗಿದೆ ಎಂಬಿತ್ಯಾದಿ ಪ್ರಮುಖ ಸಮ್ಗತಿಗಳು ಆರೋಪ ಪಟ್ಟಿಯಲ್ಲಿದೆ.
ಕೊರೊನಾ ಲಾಕ್ಡೌನ್ ಕಾರಣದಿಂದ ಆರೋಪಿ ಆದಿತ್ಯ ರಾವ್ನನ್ನು ಬ್ರೈನ್ ಮ್ಯಾಪಿಂಗ್ ಸಾಧ್ಯವಾಗಿಲ್ಲ. ಈ ಸಂಬಂಧ ನ್ಯಾಯಾಲಯದ ಅನುಮತಿ ಪಡೆಯಲಾಗಿದ್ದು, ಲಾಕ್ಡೌನ್ ಸಂಪೂರ್ಣ ತೆರವಾದ ಬಳಿಕ ಆತನನ್ನು ಬೆಂಗಳೂರಿಗೆ ಕರೆದೊಯ್ದು ಈ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ತನಿಖಾಧಿಕಾರಿ ಎಸಿಪಿ ಕೆ. ಯು. ಬೆಳ್ಳಿಯಪ್ಪ ಅವರು ತಿಳಿಸಿದ್ದಾರೆ.