ಮಂಗಳೂರು,ಜೂ12 (DaijiworldNews/MSP): ಹಿಂದಿನ ಎರಡು ವರ್ಷಗಳಲ್ಲಿ ಉಂಟಾದ ಭಾರೀ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗಿ ಹಾನಿಗೀಡಾಗಿರುವ ಕಾರಣ ಮುಂದೆ ಸಂಭವಿಸಬಹುದಾದ ಅಪಾಯವನ್ನು ತಡೆಗಡ್ಡುವ ನಿಟ್ಟಿನಲ್ಲಿ ಹಾಗೂ ರಸ್ತೆಯ ಸುರಕ್ಷತೆಗಾಗಿ ಇದೇ 11 ರಿಂದ ಆಗಸ್ಟ್ 30ರವರೆಗೆ ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಿ, ಕೊಡಗು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಇದರಿಂದಾಗಿ ಪುತ್ತೂರು - ಸುಳ್ಯ ಸಂಪಾಜೆ ಮೂಲಕ ಕೊಡಗು ಜಿಲ್ಲೆಗೆ ಪ್ರವೇಶಿಸುವ ಮಾಣಿ ಮೈಸೂರು ಹೆದ್ದಾರಿಯಲ್ಲಿ ಭಾರೀ ಗಾತ್ರದ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಆದರೆ ಅಡುಗೆ ಅನಿಲ ಮತ್ತು ಮತ್ತಿತ್ತರ ಅಗತ್ಯ ವಾಹನಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.
ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್ಪೋಸ್ಟ್ ಆರಂಭಿಸಿ, 24 ಗಂಟೆಯೂ ನಿಗಾ ವಹಿಸಲು ಸಿಬ್ಬಂದಿ ನಿಯೋಜಿಸಲು ಸೂಚಿಸಲಾಗಿದೆ. ಎಲ್ಲ ರೀತಿಯ ಮರದ ದಿಮ್ಮಿ ಮತ್ತು ಮರಳು ಸಾಗಣೆ ವಾಹನಗಳು, ವಾಹನದ ನೋಂದಣಿ ತೂಕ 16,200 ಕೆ.ಜಿ. ಗಿಂತ ಹೆಚ್ಚಿನ ಸರಕು ಸಾಗಣೆ ವಾಹನ, ಬುಲೆಟ್ ಟ್ಯಾಂಕರ್, ಶಿಪ್, ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್, ಮಲ್ಟಿ ಎಕ್ಸಲ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.