ಹೆಜಮಾಡಿ,ಜೂ12 (DaijiworldNews/MSP): ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ನಾಡದೋಣಿಗಳ ಔಟ್ಬೋರ್ಡ್ ಇಂಜಿನ್ಗಳ ರಿಪೇರಿ ಅಂಗಡಿಯೊಂದಕ್ಕೆ ಶುಕ್ರವಾರ ಮುಂಜಾವ ಅಕಸ್ಮಿಕ ಬೆಂಕಿ ಅನಾಹುತ ಸಂಭವಿಸಿದ್ದು, ರೂ. 20 ಲಕ್ಷ ನಷ್ಟ ಸಂಭವಿಸಿದೆ.
ಹೆಜಮಾಡಿಯ ಖ್ಯಾತ ಇಂಜಿನ್ ಮೆಕ್ಯಾನಿಕ್ ದಿವಾಕರ ಹೆಜ್ಮಾಡಿಯವರಿಗೆ ಸೇರಿದ ಅಂಗಡಿ ಇದಾಗಿದ್ದು, ಅಲ್ಲಿ ರಿಪೇರಿಗೆ ಬಂದ ಸುಮಾರು ೧೦ ಕ್ಕೂ ಅಧಿಕ ಇಂಜಿನ್ಗಳು, ಸಹಸ್ರಾರು ಮೌಲ್ಯದ ಇಂಜಿನ್ ಬಿಡಿಭಾಗಗಳು ಅಂಗಡಿ ಸಮೇತ ಬೆಂಕಿಗಾಹುತಿಯಾಗಿದೆ. ಮಧ್ಯರಾತ್ರಿ ೨ ಗಂಟೆಯ ಸಮಯ ಶಾರ್ಟ್ಸರ್ಕ್ಯುಟ್ನಿಂದ ಬೆಂಕಿ ಕಾಣ ಸಿಕೊಂಡಿದ್ದು, ಪಟಪಟ ಶಬ್ದ ಕೇಳಿ ಪಕ್ಕದ ಮನೆಯವರು ಹಾಗೂ ರಸ್ತೆಯಲ್ಲಿ ಸಾಗಿದವರು ಬೆಂಕಿ ಅನಾಹುತ ಗಮನಕ್ಕೆ ತಂದಿದ್ದು, ಜನರು ಒಂದಾಗುವಷ್ಟರಲ್ಲೇ ಸಂಪೂರ್ಣ ಅಂಗಡಿ ಬೆಂಕಿಗಾಹುತಿಯಾಗಿತ್ತು. ತಕ್ಷಣ ಸ್ಥಳೀಯರು ಪಂಪ್ ಮೂಲಕ ಬೆಂಕಿಯನ್ನು ಹತೋಟಿಗೆ ತಂದಿದ್ದು, ಪಕ್ಕದ ಅಂಗಡಿ ಮತ್ತು ಸನಿಹದಲ್ಲಿ ಮನೆಗಳು ಬೆಂಕಿ ಅನಾಹುತದಿಂದ ಪಾರಾಗಿದೆ.
ಹೆಚ್ಚಿನ ಇಂಜಿನ್ಗಳು ರಿಪೇರಿಯಾಗಿದ್ದು, 2-3 ದಿನಗಳಲ್ಲಿ ವಾಪಾಸು ಕೊಡುವಂತದ್ದಾಗಿತ್ತು. ನಾಡದೋಣ ಮೀನುಗಾರಿಕಾ ಋತು ಆರಂಭಗೊಳ್ಳುವ ಹಂತದಲ್ಲೇ ಈ ದುರ್ಘಟನೆ ಸಂಭವಿಸಿದ್ದು, ಹಲವು ಬಡ ಮೀನುಗಾರರ ಬದುಕಿಗೆ ಕೊಳ್ಳಿಇಟ್ಟಿದೆ.
ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಗ್ರಾಪಂ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಆರ್ಐ ರವಿಶಂಕರ್, ಗ್ರಾಮ ಕರಣ ಕ ಅರುಣ್ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.