ಮಂಗಳೂರು, ಜೂ.13 (DaijiworldNews/MB) : ಸುಮಾರು 16 ವರ್ಷ ಹಿಂದೆ ಮಂಗಳೂರಿನಲ್ಲಿ ನಡೆದ ವಕೀಲ ನೌಷಾದ್ ಕಾಶಿಂಜಿ ಹತ್ಯೆ ಪ್ರಕರಣವನ್ನು ಬೆಂಗಳೂರು ನಗರ ಅಪರಾಧ ಪತ್ತೆದಳ(ಸಿಸಿಬಿ)ಕ್ಕೆ ಹಸ್ತಾಂತರ ಮಾಡಲಾಗಿದ್ದು ತಂಡ ಮಂಗಳೂರಿಗೆ ಆಗಮಿಸಿ ತನಿಖೆ ಆರಂಭ ಮಾಡಿದೆ.
ಪಳ್ನೀರ್ನ ಅಪಾರ್ಟ್ಮೆಂಟ್ನಲ್ಲಿ 2004ರ ಏ.9ರಂದು ನೌಷಾದ್ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೂ ಮುನ್ನ ಭೂಗತ ಪಾತಕಿ ರವಿ ಪೂಜಾರಿ ಕೊಲೆ ಬೆದರಿಕೆ ಹಾಕಿದ್ದ ಕುರಿತಾಗಿ ತನಿಖೆಯಲ್ಲಿ ತಿಳಿದು ಬಂದಿತ್ತು. ರವಿ ಪೂಜಾರಿ ಈಗ ಬೆಂಗಳೂರು ಪೊಲೀಸರ ವಶದಲ್ಲಿದ್ದು, ನೌಷಾದ್ ಹತ್ಯೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಬೆಂಗಳೂರು ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ನೌಷಾದ್ ಭೂಗತ ದೊರೆ ದಾವೂದ್ ಇಬ್ರಾಹಿಂ ಸಹಚರ ರಶೀದ್ ಮಲಬಾರಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿ ವಾದ ಮಂಡಿಸಿದ್ದು ಇಷ್ಟು ಮಾತ್ರವಲ್ಲದೆಯೇ ನೌಷಾದ್ ಕೆಲವು ಸಂಘಟನೆಗಳ ಜತೆ ನಂಟು ಹೊಂದಿದ್ದ. ಈ ನಿಟ್ಟಿನಲ್ಲಿ ರವಿ ಪೂಜಾರಿ ನೌಷಾದ್ ಮೇಲೆ ಕಣ್ಣಿಟ್ಟಿದ್ದ ಎಂದು ಹೇಳಲಾಗಿದೆ.