ಮಂಗಳೂರು, ಜೂ 13 (Daijiworld News/MSP): "ಯಾವುದೇ ವಿಚಾರದಲ್ಲಿ ಸ್ಪಷ್ಟತೆ ಇಲ್ಲದ ಗೊಂದಲದಲ್ಲಿರುವ ಸರ್ಕಾರವೂ ಸಂಪೂರ್ಣ ವಿಫಲವಾಗಿದೆ" ಎಂದು ಸರ್ಕಾರದ ವಿರುದ್ದ ಶಾಸಕ ಯು.ಟಿ ಖಾದರ್ ಕಿಡಿ ಕಾರಿದ್ದಾರೆ.
"ರಾಜ್ಯ ಸರ್ಕಾರದಲ್ಲಿ ಸಚಿವರು, ಶಿಕ್ಷಣ ಇಲಾಖೆ ಮಧ್ಯೆ ಸಮನ್ವಯತೆ ಇಲ್ಲ, ಶಾಲಾ ಕಾಲೇಜುಗಳ ಆರಂಭ ವಿಚಾರದಲ್ಲಿ ಗೊಂದಲಕಾರಿ ತೀರ್ಮಾನ ತೆಗೆದುಕೊಳ್ಳುತ್ತಿದೆ. ಆನ್ ಲೈನ್ ಶಿಕ್ಷಣದ ಕುರಿತು ದಿನಕ್ಕೊಂದು ಹೇಳಿಕೆ ನೀಡಿ ವಿದ್ಯಾರ್ಥಿಗಳ ಹೆತ್ತವರಲ್ಲಿ ಭಯದ ವಾತವರಣವನ್ನು ಸೃಷ್ಠಿಸಬೇಡಿ" ಎಂದು ಖಾದರ್ ಹೇಳಿದ್ದಾರೆ.
"ಜನಾಭಿಪ್ರಾಯಕ್ಕೆ ರಾಜ್ಯ ಸರ್ಕಾರ ಮನ್ನಣೆ ಕೊಡಬೇಕು. ಒಮ್ಮೆ ಪರೀಕ್ಷೆ ಇದೆ, ಇನ್ನೊಮ್ಮೆ ಪರೀಕ್ಷೆ ಇಲ್ಲ ಎಂದು ಹೇಳಿ ಗೊಂದಲ ಸೃಷ್ಟಿಬಾರದು.ಮೊದಲು ಪರೀಕ್ಷೆ ಬಗ್ಗೆ ತೀರ್ಮಾನ ಮಾಡಿ, ಆ ಬಳಿಕ ನಿಗದಿತ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಸಮರ್ಪಕ ವ್ಯವಸ್ಥೆ ಮಾಡಿಲಿ ಆ ಬಳಿಕ ಆನ್ ಲೈನ್ ಶಿಕ್ಷಣದ ಬಗ್ಗೆ ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಲಿ" ಎಂದು ಸಲಹೆ ನೀಡಿದ್ದಾರೆ.
"ಒಂದು ವೇಳೆ ಆನ್ ಲೈನ್ ಶಿಕ್ಷಣ ಮೊಬೈಲ್ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳು ಹೇಗೆ ಶಿಕ್ಷಣ ಪಡಿಬೇಕು.?ಆನ್ ಲೈನ್ ಶಿಕ್ಶಣ ಆರಂಭಿಸಿದ್ರೆ ಕಡ್ಡಾಯ ಮಾಡಿದ್ರೆ ಬಡ ಮಕ್ಕಳ ಮಾನಸಿಕ ಸ್ಥಿತಿ ಏನಾಗಬಹುದು.?ಎಲ್ಲರಲ್ಲೂ ಸ್ಮಾರ್ಟ್ ಫೋನ್ ತೆಗೆದುಕೊಳ್ಳವ ಶಕ್ತಿ ಇಲ್ಲ. ಕೆಲವೊಂದು ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಿಗೆ ಸಂಬಳ ಕೂಡಾ ಇಲ್ಲ, ಇನ್ನು ಕೆಲವರು ಈಗಾಗಲೇ ಕೆಲಸ ಕಳೆದು ಕೊಂಡಿದ್ದಾರೆ. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯೂ ತೊಂದರೆ ಸಿಲುಕಿದೆ . ಈ ಬಗ್ಗೆ ಸರ್ಕಾರ ಸಮಸ್ಯೆ ಬಗೆ ಹರಿಸಲಿ" ಎಂದು ಸಲಹೆ ನೀಡಿದ್ದಾರೆ.