ಬಂಟ್ವಾಳ,ಜೂ 13 (Daijiworld News/MSP): ರಸ್ತೆ ಎಲ್ಲಿದೆ ಹುಡುಕಿ ಕೊಡಿ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ವಾಹನ ಸವಾರರು. ಇದು ಮಂಗಳೂರು ವಿಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡು - ಪುಂಜಾಲಕಟ್ಟೆ ರಸ್ತೆಯ ಅವ್ಯವಸ್ಥೆಯ ಕಥೆ!
ಬಂಟ್ವಾಳ ಬೈಪಾಸ್ ರಸ್ತೆಯಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಸದ್ಯ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಮಾಡುವುದೇ ಸವಾಲಾಗಿ ಪರಿಣಮಿಸಿದೆ ಎಂದು ವಾಹನ ಸವಾರರ ಆರೋಪಿಸುತ್ತಿದ್ದಾರೆ. ಬಿ.ಸಿರೋಡಿನಿಂದ ಪುಂಜಾಲಕಟ್ಟೆ ವರೆಗೆ 19.85 ಕಿ.ಮೀ ರಸ್ತೆ ಉದ್ದ ಕಾಮಗಾರಿ ನಡೆಯುತ್ತಿದ್ದು 16 ಕಿ.ಮೀ.ಉದ್ದದ ದ್ವಿಪಥ ರಸ್ತೆ, 10 ಮೀ ಅಗಲ, ಅದರಲ್ಲು ಬಿಸಿರೋಡಿನಿಂದ ಜಕ್ರಿಬೆಟ್ಟುವರೆಗೆ 3.85 ಮೀ. ಕಾಂಕ್ರೀಟ್ ಚತುಷ್ಪತ ರಸ್ತೆ 14 ಮೀ ಅಗಲ ದಲ್ಲಿ ನಡೆಯುತ್ತಿದೆ. ಆದರೆ ಕಾಮಗಾರಿ ಆರಂಭವಾಗಿ ವರ್ಷ ಒಂದು ಕಳೆದರೂ ನಿರ್ಧಿಷ್ಟ ಸಮಯದಲ್ಲಿ ಕಾಮಗಾರಿ ನಡೆಯದೆ ವಾಹನ ಸವಾರರ ಗೋಳು ಕೇಳುವವರಿಲ್ಲದಂತಾಗಿದೆ.
ರಸ್ತೆಯನ್ನು ಅಗೆದು ಹಾಕಿದ ಬಳಿಕ ಜಲ್ಲಿಮಿಶ್ರಿತ ಕಲ್ಲು ಮಣ್ಣು ಹಾಕಲಾಗಿತ್ತು. ಆದರೆ ಮಳೆಗಾಲ ಆರಂಭವಾದ ಕೂಡಲೇ ಇದರ ಮಣ್ಣು ಎದ್ದು ಹೋಗಿ ರಸ್ತೆಯೆಲ್ಲಾ ಮಾಯವಾಗಿ ಹೊಂಡಗುಂಡಿಗಳು ನಿರ್ಮಾಣ ವಾಗಿ ಕೆಸರು ತುಂಬಿದ ರಸ್ತೆ ಯಾಗಿದೆ. ರಸ್ತೆ ಎಲ್ಲಿದೆ? ಕೆಸರೇ ತುಂಬಿದ ರಸ್ತೆಯಲ್ಲಿ ಸಂಚರಿಸುವುದು ಹೇಗೆ ಎಂಬುದೇ ಸವಾಲಾಗಿ ಪರಿಣಮಿಸಿದೆ.
ಕೋವಿಡ್ 19 ನಿಂದಾಗಿ ಕಾಮಗಾರಿ ಮುಗಿಸಲು ವಿಳಂಬವಾಗಿರಬಹುದು.ಆದರೆ ಇಂತಹ ರಸ್ತೆಯಲ್ಲಿ ವಾಹನ ಸಂಚಾರ ನಡೆಸುವುದಾದರೂ ಹೇಗೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಮಂಗಳೂರು ವಿಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡು - ಪುಂಜಾಲಕಟ್ಟೆ ರಸ್ತೆಯ ಕಾಮಗಾರಿ ಮುಗಿಸಲು ಡಿಸೆಂಬರ್ ವರೆಗೆ ಗುತ್ತಿಗೆದಾರರಿಗೆ ಸಮಯಾವಕಾಶವಿದೆ.ಆದರೆ ಸದ್ಯ ವಾಹನ ಸಂಚಾರಕ್ಕೆ ಅಡಚಣೆಯಾಗದ ರೀತಿಯಲ್ಲಿ ರಸ್ತೆಯನ್ನು ರಿಪೇರಿ ಮಾಡಿಕೊಡುವ ಕೆಲಸ ಗುತ್ತಿಗೆದಾರರು ಮಾಡಬೇಕಾಗಿದೆ.