ಸುಬ್ರಹ್ಮಣ್ಯ, ಜೂ 13 (Daijiworld News/MSP): ಕೋವಿಡ್-19 ಕಾರಣದಿಂದ ಲಾಕ್ಡೌನ್ ಆಗಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ವಿಧಿಗಳು ಆರಂಭವಾದ ನಂತರದಲ್ಲಿ ಪ್ರಥಮ ಬಾರಿಗೆ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ಮುಜರಾಯಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವಸ್ಥಾನಕ್ಕೆ ಭೇಟಿ ನೀಡಿ ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಸಚಿವರು ನಂತರ ಕಡಬ, ಸುಳ್ಯ ತಾಲೂಕಿಗೆ ಸಂಬಂಧಿಸಿದ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಮುಜರಾಯಿ ಸಚಿವರು ಗೋಪುರದ ಬಳಿಯಿಂದಲೇ ದೇವರಿಗೆ ನಮಸ್ಕರಿಸಿದರು. ಬಳಿಕ ದೇವಸ್ಥಾನದ ಬಳಿ ಮಾಡಲಾಗಿರುವ ಜ್ವರ ಪರಿಶೀಲನೆ, ಸ್ಯಾನಿಟೇಸರ್ ಮಾಡಿಸಿಯೇ ಸಚಿವರು ಆಡಳಿತ ಕಚೇರಿಗೆ ಭೇಟಿ ನೀಡಿದರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಛೇರಿಯ ಮೀಟಿಂಗ್ ಹಾಲ್ನಲ್ಲಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆಯಲ್ಲಿ ಸುಳ್ಯ ಶಾಸಕ ಎಸ್ ಅಂಗಾರ, ದೇವಸ್ಥಾನದ ಆಡಳಿತಾಧಿಕಾರಿ ರೂಪಾ ಎಂ.ಜೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್,ಕಡಬ ತಾಲೂಕು ತಹಶೀಲ್ದಾರರಾದ ಜಾನ್ ಪ್ರಕಾಶ್ ರೋಡ್ರಿಗಸ್ಸ್, ವೈದ್ಯಾಧಿಕಾರಿ ಡಾ.ತ್ರಿಮೂರ್ತಿ, ಸಹಾಯಕಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲು, ಇಂಜಿನಿಯರ್ ಉದಯಕುಮಾರ್, ಪಿಡಿಒ ಮುತ್ತಪ್ಪ, ಸೇರಿದಂತೆ ಪ್ರಮುಖರು,ರಾಜಕೀಯ ಮುಖಂಡರು ಉಪಸ್ಥಿತರಿದ್ದರು