ಮಂಗಳೂರು, ಮಾ 31: ತುಳು ಚಿತ್ರರಂಗಕ್ಕೆ ಸರಕಾರದಿಂದ ಲಭಿಸುತ್ತಿರುವ ಸಹಾಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಶ್ರಮಿಸುತ್ತೇನೆ ಎಂದು ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಕೋಸ್ಟಲ್ವುಡ್ನಲ್ಲಿ ಹೊಸ ಭರವಸೆ ಮೂಡಿಸಿರುವ ಖಾದರ್, ತುಳು ಚಿತ್ರರಂಗಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತುಳು ಚಿತ್ರದ ಸಬ್ಸಿಡಿ ಇನ್ನಷ್ಟು ಹೆಚ್ಚಿಸುವ ಕುರಿತು ವಿಧಾನ ಸಭೆಯ ಗಮನ ಸೆಳೆಯುತ್ತೇನೆ. ವರ್ಷವೊಂದರಲ್ಲಿ ಸುಮಾರು 10-15 ತುಳು ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಐದು ಸಿನಿಮಾಗಳಿಗೆ ಪ್ರತಿವರ್ಷ ತಲಾ 10 ಲಕ್ಷ ರೂಪಾಯಿ ಸಹಾಯಧನ ಸಿಗುತ್ತಿದೆ. ಪ್ರಾದೇಶಿಕ ಚಿತ್ರಗಳ ವ್ಯಾಪ್ತಿಯಲ್ಲಿ ತುಳು, ಕೊಂಕಣಿ, ಬ್ಯಾರಿ, ಕೊಡವ ಮತ್ತು ಲಂಬಾಣಿ ಭಾಷೆಗಳ ಸಿನಿಮಾಗಳು ಸೇರಿವೆ. ಪ್ರಾದೇಶಿಕ ಭಾಷೆಗಳ ಗುಣಮಟ್ಟದ ಎಲ್ಲ ಸಿನಿಮಾಗಳಿಗೂ ಸಹಾಯಧನ ಸಿಗುವಂಥ ವ್ಯವಸ್ಥೆ ಆಗಬೇಕು ಎಂದು ಹೇಳಿದ್ದಾರೆ.
ಸರಕಾರದಿಂದ ಸಿಗುವ ಆ ಮೊತ್ತ ಸುಲಭವಾಗಿ ಮತ್ತು ನೇರವಾಗಿ ನಿರ್ಮಾಪಕರ ಖಾತೆಗೆ ಜಮೆ ಆಗಬೇಕು. ಸಬ್ಸಿಡಿ 10 ಲಕ್ಷ ರೂ.ನಿಂದ 25 ಲಕ್ಷ ರೂ.ವಿಗೆ ಏರಿಸಬೇಕು ಎಂಬ ಕೂಗು ನಿರ್ಮಾಪಕರದ್ದು. ಹೀಗಾಗಿ ಸರಕಾರದಿಂದ ಲಭಿಸುತ್ತಿರುವ ಸಹಾಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಶ್ರಮಿಸುತ್ತೇನೆ ಎಂದು ಯು. ಟಿ. ಖಾದರ್ ಭರವಸೆ ನೀಡಿದ್ದಾರೆ.