ಮಂಗಳೂರು, ಜೂ 14 (DaijiworldNews/PY) : ಕುದ್ರೋಳಿಯ ಕಸಾಯಿಖಾನೆಗೆ ಜೋಕಟ್ಟೆಯಿಂದ ಎಮ್ಮೆ ಸಾಗಾಟ ಮಾಡುತ್ತಿದ್ದ ವ್ಯಾಪಾರಿಯನ್ನು ವಾಹನಕ್ಕೆ ಕಟ್ಟಿ ಸಂಘಪರಿವಾರದ ಕಾರ್ಯಕರ್ತರು ಥಳಿಸಿದ ಘಟನೆ ಭಾನುವಾರ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಜೋಕಟ್ಟೆ ನಿವಾಸಿ ಅಬ್ದುಲ್ ರಹ್ಮಾನ್ (34) ಎನ್ನಲಾಗಿದೆ.
ಅಬ್ದುಲ್ ರಹ್ಮಾನ್ ಭಾನುವಾರ ಮುಂಜಾನೆ ತನ್ನ ಮನೆಯಲ್ಲಿದ್ದ ನಾಲ್ಕು ಎಮ್ಮೆಗಳನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದರು. ಈ ನಡುವೆ, ಸಂಘಪರಿವಾರದ ಕಾರ್ಯಕರ್ತರು ನಗರದ ಉರ್ವದಲ್ಲಿನ ಇನ್ಫೋಸಿಸ್ ಕಚೇರಿಯ ಸಮೀಪ ವಾಹನವನ್ನು ತಡೆದು ನಿಲ್ಲಿಸಿದ್ದು, ವಾಹನದಿಂದ ರಹ್ಮಾನ್ ಅವರನ್ನು ಕೆಳಗೆ ಇಳಿಸಿ ವಾಹನಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ವ್ಯಾಪಾರಿ ಹಾಗೂ ಎಮ್ಮೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಪೊಲೀಸರು, ರಹ್ಮಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ಹಾಗೂ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದಾರೆ. ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉರ್ವ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು-ಪ್ರತಿ ದೂರು ದಾಖಲಾಗಿದೆ.
ಪೊಲೀಸರು ವಶಕ್ಕೆ ಪಡೆಯಲಾದ ಎಮ್ಮೆಗಳ ಸಹಿತ ಒಟ್ಟು ಹತ್ತು ಜಾನುವಾರುಗಳನ್ನು ರಹ್ಮಾನ್ ಅವರು ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೃಷಿ ಮಾರುಕಟ್ಟೆಯಿಂದ ಖರೀದಿ ಮಾಡಿದ್ದರು. ಹತ್ತು ಜಾನುವಾರಗಳಲ್ಲಿ ಈಗಾಗಲೇ ಆರನ್ನು ಮಾರಾಟ ಮಾಡಿದ್ದು, ಉಳಿದ ನಾಲ್ಕು ಎಮ್ಮೆಗಳನ್ನು ತಮ್ಮ ಮನೆಯಲ್ಲಿ ಉಳಿಸಿಕೊಂಡಿದ್ದರು. ಭಾನುವಾರ ಜೋಕಟ್ಟೆಯ ತನ್ನ ಮನೆಯಿಂದ ಕುದ್ರೋಳಿಗೆ ಸಾಗಾಟ ಮಾಡುವಾಗ ಈ ಘಟನೆ ನಡೆದಿದೆ.
ಅಬ್ದುಲ್ ರಹ್ಮಾನ್ ಅವರು ಎಮ್ಮೆಗಳನ್ನು ಸಾಗಿಸುತ್ತಿದ್ದರು. ಅವರು ಸಾಗಿಸುತ್ತಿದ್ದ ವಾಹನದಲ್ಲಿ ದನಗಳು ಇರಲಿಲ್ಲ. ಅವರು ಜಾನುವಾರುಗಳನ್ನು ಖರೀದಿ ಮಾಡಿದ್ದ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.