ಮಂಗಳೂರು, ಜೂ 15 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 268 ಕೊರೊನಾ ಪ್ರಕರಣ ವರದಿಯಾಗಿದೆ. ಈ ಪೈಕಿ 8 ಮಂದಿ ಸಾವಿಗೀಡಾದರೂ ಇಲ್ಲಿಯವರೆಗೆ 153 ಮಂದಿಯ ಚಿಕಿತ್ಸೆ ಪೂರ್ಣಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಆದರೆ ಕೊರೊನಾ ಸೋಂಕಿತರ ಪೈಕಿ ನಗರದ ವೈದ್ಯರಿಗೆ ಇಬ್ಬರು ವೃದ್ದರ ಕೋವಿಡ್ ಕೇಸ್ಸವಾಲಾಗಿ ಕಾಡುತ್ತಿದೆ. ಮೇಲ್ನೋಟಕ್ಕೆ ಯಾವುದೇ ರೋಗ ಲಕ್ಷಣವಿಲ್ಲದೇ ಈ ಇಬ್ಬರೂ ವೃದ್ದರೂ ಆರೋಗ್ಯವಾಗಿದ್ದರೂ ಕಳೆದೊಂದು ತಿಂಗಳಿಂದ ಕೊರೊನಾ ಮಾತ್ರ ಇವರಿಬ್ಬರ ಬೆನ್ನು ಬಿಡದ ಬೇತಾಳನಂತೆ ಕಾಡುತ್ತಿದೆ. ಇದು ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.
ಮೇ.12ರಂದು ದುಬೈನಿಂದ ಬಂದಿದ್ದ 81 ವರ್ಷದ ವೃದ್ಧ, ಹಾಗೂ ಮೇ.18ರಂದು ದುಬೈನಿಂದ ಬಂದಿದ್ದ 76 ವರ್ಷದ ವೃದ್ದ ಇವರಿಬ್ಬರಲ್ಲೂ ಕೊರೊನಾ ಸೋಂಕು ಧೃಡಪಟ್ಟ ಹಿನ್ನಲೆಯಲ್ಲಿ ನಗರದ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆಯ ಬಳಿಕ ಆರು ಬಾರಿ ಟೆಸ್ಟ್ ನಡೆಸಿದರೂ ವರದಿ ಮಾತ್ರ ಕೊರೊನಾ ಪಾಸಿಟಿವ್ ಬಂದಿದೆ.
81 ವರ್ಷ ವೃದ್ದನ ಪತ್ನಿ, ಮಗಳು ಪಾಸಿಟಿವ್ ಆಗಿದ್ದರೂ ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದಾರೆ. ಆದರೆ ಇವರಿಬ್ಬರಲ್ಲಿ ಮಾತ್ರ ರೋಗ ಲಕ್ಷಣಗಳಿಲ್ಲದೆ ವರದಿ ನೆಗೆಟಿವ್ ಬಾರದೆ ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲೇ ಇದ್ದು ವೃದ್ದರು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿದ್ದಾರೆ. ಅಲ್ಲದೆ ವೈದ್ಯರಿಗೂ ಈ ಎರಡು ಪ್ರಕರಣ ಚಿಕಿತ್ಸೆಗೆ ಸವಾಲಾಗಿ ಪರಿಣಮಿಸಿದೆ.