ಮಂಗಳೂರು, ಜೂ.15 (DaijiworldNews/MB) : ವಿಶ್ವದಾದ್ಯಂತ ಹರಡಿರುವ ಕೊರೊನಾ ಸೋಂಕಿಗೆ ಈಗಾಗಲೇ ವಿಶ್ವದೆಲ್ಲೆಡೆ ಲಸಿಕೆ ತಯಾರಿಸುತ್ತಿದ್ದು ಸೆಪ್ಟೆಂಬರ್ ಕೊನೆಗೆ ಲಸಿಕೆ ಅಭಿವೃದ್ದಿ ಕಾರ್ಯ ಅಂತಿಮವಾಗುವ ಸಾಧ್ಯತೆಯಿದೆ ಎಂದು ಎ.ಜೆ ಆಸ್ಪತ್ರೆಯ ಹೃದ್ರೋಗ ವಿಭಾಗ ಮುಖ್ಯಸ್ಥ ಬಿ.ವಿ ಮಂಜುನಾಥ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ದಾಯ್ಜಿವಲ್ಡ್ ವಾಹಿನಿಯೊಂದಿಗೆ ಮಾತನಾಡಿದ ಅವರು, ಕೊರೊನಾ ಬೇರೆಯೇ ಲಸಿಕೆಯ ಅಗತ್ಯವಿದ್ದು ವಿಶ್ವದಾದ್ಯಂತ ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಕಾರ್ಯ ನಡೆಯುತ್ತಲಿದೆ. ಸಾಮಾನ್ಯವಾಗಿ ಯಾವುದೇ ಲಸಿಕೆ ತಯಾರಿಸಲು ಮೂರು ಹಂತಗಳಿವೆ. ಸಾಮಾನ್ಯವಾಗಿ ಲಸಿಕೆ ಅಭಿವೃದ್ದಿ ಪಡಿಸಲು 18 ತಿಂಗಳುಗಳು ಬೇಕಾಗುತ್ತದೆ. ಆದರೆ ಈಗ ಕೊರೊನಾ ಸಾಂಕ್ರಾಮಿಕವಾಗಿರುವ ಕಾರಣದಿಂದಾಗಿ ವಿಶ್ವದಲ್ಲೇ ಆದಷ್ಟು ಬೇಗ ಲಸಿಕೆ ಕಂಡು ಹಿಡಿಯಲು ಸಾಕಷ್ಟು ಪ್ರಯತ್ನಗಳು ಹಾಕುತ್ತಿದ್ದಾರೆ. ಲಸಿಕೆ ತಯಾರಿಕೆಯ ಮೂರು ಹಂತಗಳ ಪೈಕಿ ಕೆಲವರು ಎರಡನೇ ಹಂತ ತಲುಪಿದ್ದು ಇನ್ನು ಕೆಲವರು ಮೂರನೇ ಹಂತ ತಲುಪಿದ್ದಾರೆ. ಹಾಗಾಗಿ ಸೆಪ್ಟೆಂಬರ್ ಅಂತ್ಯದಲ್ಲಿ ಲಸಿಕೆ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದವರು ಭಾರತದ ಸೀರಂ ಇನ್ಸ್ಟಿಟ್ಯೂಟ್ ಜೊತೆಗೆ ಸೇರಿ ಈಗಾಗಲೇ ಕೊರೊನಾಗೆ ಲಸಿಕೆಯನ್ನು ಅಭಿವೃದ್ಧಿ ಪಡೆಸುತ್ತಿದ್ದಾರೆ. ಬೇರೆ ಹಲವು ರೋಗಗಳಿಗೆ ಲಸಿಕೆಯನ್ನು ತಯಾರಿಸಿದ ತಂಡ ಇದರಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಹಳ ಶೀಘ್ರವಾಗಿ ಲಸಿಕೆ ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು ಅದು ಫಲಿಸುವ ಭರವಸೆ ಇದೆ. ಆದರೆ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಕೆಲವು ಮಾನವ ಪ್ರಯೋಗಗಳು ನಡೆಯುತ್ತಿದ್ದು ಅದು ಮಾನವನಿಗೆ ಎಷ್ಟು ಸುರಕ್ಷಿತ ಎಂಬುದು ಖಚಿತವಾದ ಬಳಿಕವೇ ಈ ಲಸಿಕೆ ಕೊರೊನಾ ವಿರುದ್ಧವಾಗಿ ಬಳಸಬಹುದೇ ಎಂದು ತಿಳಿಯಬಹುದಾಗಿದೆ ಎಂದು ಕೂಡಾ ಹೇಳಿದರು.