ಮಂಗಳೂರು, ಜೂ 15 (DaijiworldNews/PY) : ಉಡುಪಿಯಿಂದ ಮಂಗಳೂರು ಕಸಾಯಿಖಾನೆಗೆ ಜಾನುವಾರು ಸಾಗಾಟವನ್ನುತಡೆ ಹಿಡಿದ ಬಜರಂಗದಳದ ಕಾರ್ಯಕರ್ತರ ಕಾರ್ಯಾಚರಣೆಯ ದೃಶ್ಯಾವಳಿಗಳು ವೈರಲ್ ಆಗಿದೆ.


ಜಾನುವಾರು ಸಾಗಾಟ ಮಾಡಿದ ವ್ಯಕ್ತಿಯನ್ನು ಜೋಕಟ್ಟೆ ನಿವಾಸಿ ಅಬ್ದುಲ್ ರಹ್ಮಾನ್ (34) ಎನ್ನಲಾಗಿದೆ.
ಭಾನುವಾರ ಮುಂಜಾನೆ ಅಬ್ದುಲ್ ರಹ್ಮಾನ್ ಎಂಬುವವರು ತನ್ನ ಮನೆಯಲ್ಲಿದ್ದ ನಾಲ್ಕು ಎಮ್ಮೆಗಳನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದರು. ಈ ನಡುವೆ ಕೊಟ್ಟಾರ ಬಳಿ ಕಾರ್ಯಕರ್ತರು ತಲ್ವಾರ್ ಹಿಡಿದು ಅಕ್ರಮ ಗೋ ಸಾಗಾಟ ತಡೆದಿದ್ದಾರೆ. ಬಳಿಕ ವಾಹನದಲ್ಲಿದ್ದ 4 ಕೋಣಗಳನ್ನು ರಕ್ಷಣೆ ಮಾಡಿದ್ದ ಕಾರ್ಯಕರ್ತರು, ಟೆಂಪೋ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ವಶಕ್ಕೆ ಪಡೆಯಲಾದ ಎಮ್ಮೆಗಳ ಸಹಿತ ಒಟ್ಟು ಹತ್ತು ಜಾನುವಾರುಗಳನ್ನು ರಹ್ಮಾನ್ ಅವರು ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೃಷಿ ಮಾರುಕಟ್ಟೆಯಿಂದ ಖರೀದಿ ಮಾಡಿದ್ದರು. ಹತ್ತು ಜಾನುವಾರಗಳಲ್ಲಿ ಈಗಾಗಲೇ ಆರನ್ನು ಮಾರಾಟ ಮಾಡಿದ್ದು, ಉಳಿದ ನಾಲ್ಕು ಎಮ್ಮೆಗಳನ್ನು ತಮ್ಮ ಮನೆಯಲ್ಲಿ ಉಳಿಸಿಕೊಂಡಿದ್ದರು. ಭಾನುವಾರ ಜೋಕಟ್ಟೆಯ ತನ್ನ ಮನೆಯಿಂದ ಕುದ್ರೋಳಿಗೆ ಸಾಗಾಟ ಮಾಡುವಾಗ ಈ ಘಟನೆ ನಡೆದಿದೆ.
ಅಬ್ದುಲ್ ರಹ್ಮಾನ್ ಅವರು ಎಮ್ಮೆಗಳನ್ನು ಸಾಗಿಸುತ್ತಿದ್ದರು. ಅವರು ಸಾಗಿಸುತ್ತಿದ್ದ ವಾಹನದಲ್ಲಿ ದನಗಳು ಇರಲಿಲ್ಲ. ಅವರು ಜಾನುವಾರುಗಳನ್ನು ಖರೀದಿ ಮಾಡಿದ್ದ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಂಬಂಧಿತ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: https://www.facebook.com/759372200771903/posts/4151774288198327/