ಉಪ್ಪಿನಂಗಡಿ, ಜೂ 15 (Daijiworld News/MSP): ಕ್ಷುಲ್ಲಕ ಕಾರಣಕ್ಕೆ ಮಕ್ಕಳೇ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆಗೈದಿರುವ ಘಟನೆ ಬೆಳ್ತಂಗಡಿಯ ಕರಾಯ ಗ್ರಾಮದ ಮುಗ್ಗದ ಆನೆಪಲ್ಲ ಎಂಬಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ.

ಆನೆಪಲ್ಲ ನಿವಾಸಿ ಧರ್ನಪ್ಪ ಪೂಜಾರಿ (65) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಧರ್ನಪ್ಪ ಪೂಜಾರಿ ಅವರನ್ನು ಮಕ್ಕಳಾದ ಮೋನಪ್ಪ ಹಾಗೂ ನವೀನ ಎಂಬವರು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆನ್ನಲಾಗಿದೆ.
ಕೊಲೆ ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಧರ್ನಪ್ಪ ಪೂಜಾರಿಯವರು ಮನೆಯಲ್ಲಿದ್ದ ತೆಂಗಿನ ಮರದಿಂದ ತೆಂಗಿನಕಾಯಿ, ಸೀಯಾಳಗಳನ್ನು ತೆಗೆದು ಮಾರಾಟ ಮಾಡುತ್ತಿದ್ದು, ಇದೇ ವಿಚಾರಕ್ಕೆ ಮಕ್ಕಳಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಅದಲ್ಲದೆ, ಕೊಲೆಯಾದ ಧರ್ನಪ್ಪ ಪೂಜಾರಿಯವರು ಕುಡಿದು ಬಂದು ಮನೆಯಲ್ಲಿ ರಂಪಾಟ ಮಾಡುತ್ತಿದ್ದರು ಎಂಬ ಮಾತುಗಳೂ ಕೇಳಿ ಬರುತ್ತಿದೆ. ಭಾನುವಾರ ಮಧ್ಯರಾತ್ರಿಯೂ ಕ್ಷುಲ್ಲಕ ಕಾರಣಕ್ಕೆ ತಂದೆ ಮಕ್ಕಳೊಳಗೆ ಜಗಳ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಜಗಳ ತಾರಕಕ್ಕೇರಿ ಮಕ್ಕಳೇ ತಂದೆಗೆ ಕತ್ತಿಯಿಂದ ಕಡಿದಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಧರ್ನಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಠಾಣೆ ಪೊಲೀಸರು ತಿಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ.