ಉಡುಪಿ, ಏ 01: ಉಡುಪಿಯ ಅಷ್ಟಮಠಾಧೀಶರ ವಿರುದ್ದ ಶಿರೂರು ಮಠದ ಶ್ರೀ ಲಕ್ಮೀವರ ತೀರ್ಥ ಸ್ವಾಮೀಜಿ ಸುದ್ದಿ ಮಾಧ್ಯಮಗಳಿಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುವಂತೆ ಈ ಹಿಂದೆಯೇ ಸೋದೆ ಮಠದಿಂದ ನೋಟಿಸ್ ಜಾರಿ ಮಾಡಲಾಗಿದ್ದರೂ ಶಿರೂರು ಸ್ವಾಮೀಜಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮಾ.15 ರಂದು ತಡರಾತ್ರಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀ ಪಾದ ನೇತೃತ್ವದಲ್ಲಿ ಸಭೆ ನಡೆದಿದ್ದು, ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ಪ್ರೀಯ ತೀರ್ಥ ಸ್ವಾಮೀಜಿ ,ಕಿರಿಯ ಶ್ರೀ ಈಶ ಪ್ರೀಯ ತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ಶ್ರೀ ವಿದ್ಯಾ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ವಿಶ್ವ ವಲ್ಲಭ ತೀರ್ಥ ಸ್ವಾಮೀಜಿ,ಭಾಗವಹಿಸಿದ್ದರು.ಈ ಸಭೆಯಲ್ಲಿ ಶ್ರೀಗಳ ವಿರುದ್ದ ಸೂಕ್ತ ಕ್ರಮ ತೆಗೆದು ಕೊಳ್ಳುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಹೀಗಾಗಿ ಶಿರೂರು ಮಠಕ್ಕೆ ದ್ವಂದ್ವ ಮಠವಾಗಿರುವ ಸೋದೆ ಮಠದಿಂದ ನೋಟಿಸ್ ನೀಡಲಾಗಿತ್ತು. ಧಾರ್ಮಿಕ ಚೌಕಟ್ಟು ಮೀರಿ ನನಗೆ ಮಕ್ಕಳಿದ್ದಾರೆ ಎಂದು ನೀಡಿರುವ ಬಹಿರಂಗ ಹೇಳಿಕೆಗೆ ಒಪ್ಪಿತವಲ್ಲ. ಅಲ್ಲದೆ ಉಳಿದ ಅಷ್ಟಮಠಾಧೀಶರಿಗೂ ಮಕ್ಕಳಿದ್ದಾರೆ ಎಂದು ಹೇಳಿರುವುದು ಕೂಡಾ ಅಸಮ್ಮತವಾಗಿದೆ ಹೀಗಾಗಿ ಬಹಿರಂಗವಾಗಿ ಕ್ಷಮೆ ಯಾಚಿಸಿಬೇಕು ಎಂದು ನೋಟಿಸ್ ನೀಡಲಾಗಿತ್ತು.
ಆದರೆ ನೋಟಿಸ್ ನೀಡಿ ಹಲವು ದಿನಗಳಾದರೂ ಶಿರೂರು ಸ್ವಾಮೀಜಿ ಯಾವುದೇ ಉತ್ತರವನ್ನು ನೀಡಿಲ್ಲವಾದ್ದರಿಂದ ಅವರ ಮುಂದಿನ ನಡೆ ಗಮನಿಸಿ ನಿರ್ಧಾರ ಕೈಗೊಳ್ಳಲು ಉಳಿದ ಮಠಾಧೀಶರು ತೀರ್ಮಾನಿಸಿದ್ದಾರೆ. ಈ ನಡುವೆ ಶಿರೂರು ಶ್ರೀಗಳು ಸುದ್ದಿಗೋಷ್ಟಿ ನಡೆಸಿ ಉಡುಪಿ ವಿಧಾನ ಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟರೆ ಬಿಜೆಪಿಯಿಂದ ಇಲ್ಲವೇ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆಎಂದು ಷೋಷಿಸಿದ್ದು ಕೂಡಾ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು.