ಬೆಳ್ತಂಗಡಿ, ಜೂ 15 (Daijiworld News/MSP): ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಮಹಾಮಾರಿ ವೇಗವಾಗಿ ಹರಡುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರವು ವಿಫಲವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದ ಸನ್ನಿಧಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಮಾದ್ಯಮದವರೊಂದಿಗೆ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು, ಸಂಪ್ರದಾಯ ವೃತ್ತಿ ಮಾಡುವವರು ಅನೇಕರು ಸಂಕಷ್ಟದಲ್ಲಿದ್ದಾರೆ ಹಾಗೂ ಆರ್ಥಿಕತೆಯ ಬೆನ್ನೆಲುಬಾಗಿರುವ ವಲಸೆ ಕಾರ್ಮಿಕರು ನಡೆದು ಹೋಗುತ್ತಿರುವ ದೃಶ್ಯ ಮನ ಕಲುಕುವಂತಿದೆ ಅವರನ್ನು ನಿಯಂತ್ರಿಸಲು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಕರೋನಾ ವಾರಿಯರ್ಸ್ ತಮ್ಮ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ ಅಂತಹವರಿಗೆ ರಕ್ಷಣೆ ಸರಕಾರ ನೀಡುತ್ತಿಲ್ಲ. ಪಿಪಿಇ ಕಿಟ್ ಕಳಪೆ ಮಟ್ಟದ್ದು ಸರಬರಾಜಾಗಿದ್ದು ಅವರ ಜೀವಕ್ಕೆ ರಕ್ಷಣೆ ಇಲ್ಲದಂದಾಗಿದೆ. ಬಿಎಂಟಿಸಿ ನೌಕರರಿಗೂ ಮಾಸ್ಕ್, ಸ್ಯಾನಿಟೈಜರ್ ದೊರಕುತ್ತಿಲ್ಲ ಅಂತೆಯೇ ಸ್ಯಾನಿಟೈಜರ್ ನೀರು ಬೆರಸಿ ಖರೀದಿಯಲ್ಲಿ ಅಕ್ರಮ ಎಸಗಿರುವ ಕುರಿತು ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದರು.
ಕೊರೋನಾ ವೈರಸ್ ನಿರಂತರವಾಗಿ ಹೆಚ್ಚುತ್ತಿದ್ದು ಅದನ್ನು ತಡೆಗಟ್ಟಲು ಗಂಭೀರವಾಗಿ ಪ್ರಯತ್ನ ನಡೆಸಬೇಕು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಿ ಎಂಬ ಮಾತು ಸರಿಯಲ್ಲ. ರಾಷ್ಟ್ರೀಯ ವಿಪತ್ತುವಿನ ಅಡಿಯಲ್ಲಿ ಜೀವರಕ್ಷಣೆ, ಉಚಿತ ಆರೋಗ್ಯ ಚಿಕಿತ್ಸೆ ಸರಕಾರದ ಮೂಲಭೂತ ಕರ್ತವ್ಯವಾಗಿದ್ದು ಕೋವಿಡ್ ಪರೀಕ್ಷೆ ಹಾಗೂ ಚಿಕಿತ್ಸೆ ಉಚಿತವಾಗಿ ನೀಡಬೇಕೆಂದರು.
ಕೊವೀಡ್ ಪರೀಕ್ಷೆಯ ಪಲಿತಾಂಶ ತಡವಾಗಿ ಬರುತ್ತಿದ್ದು ಇದರಿಂದ ಶಂಕಿತರಿಂದ ಬೇರೆಯವರಿಗೆ ಹರಡುವ ಸಾಧ್ಯತೆ ಹೆಚ್ಚಿದ್ದು ಪರೀಕ್ಷೆಯನ್ನು ದಿನಂಪ್ರತಿ 25 ಸಾವಿರಕ್ಕೆ ಹೆಚ್ಚಿಸಬೇಕು. ಕೇಂದ್ರ ಸರಕಾರವು 20ಲಕ್ಷ ಕೋಟಿಯ ಪ್ಯಾಕೇಜ್ ಘೋಷಿಸಿತು ಇದರಿಂದ ಬಡವರು, ಮಧ್ಯಮ ವರ್ಗದವರು ಇತರರಿಗೆ ಯಾವುದೇ ಉಪಯೋಗವಾಗಲಿಲ್ಲ. ಅವೈಜ್ಞಾನಿಕ ಲಾಕ್ಡೌನ್ನಿಂದಾಗಿ ಆರ್ಥಿಕ ಹಿಂಜರಿತವಾಗಿದ್ದು ಆಧಾಯ ತೆರಿಗೆ ಮಿತಿಯ ಕೆಳಗೆ ಇರುವವರಿಗೆ ಕೂಡಲೇ ನೇರವಾಗಿ ರೂ 10 ಸಾವಿರ ರೂ.ಗಳನ್ನು ಅವರ ಖಾತೆಗೆ ವರ್ಗಾವಣೆ ಮಾಡಬೇಕು ಅಂತೆಯೇ 6 ತಿಂಗಳಿಗೆ 7500ರಂತೆ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಮಂಜುನಾಥನ ದರ್ಶನ:
ಧರ್ಮಸ್ಥಳಕ್ಕೆ ಪತ್ನಿ ಗೀತರೊಂದಿಗೆ ಆಗಮಿಸಿದ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಅವರು ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಿ ಜಗತ್ತಿನ ಮಹಾಮಾರಿ ಕೋರೋನಾ ಆದಷ್ಟು ಬೇಗ ಕಡಿಮೆಯಾಗಲಿ. ಇದರಿಂದ ಎಲ್ಲರೂ ಆತಂಕದಲ್ಲಿದ್ದು ಸಂಕಷ್ಟಕ್ಕೆ ಒಳಗಾಗಿದ್ದಾರೆ, ಇದರಿಂದ ಮುಕ್ತವಾಗಿ ಆರೋಗ್ಯ, ಸುಖ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಈ ಸಂದರ್ಭ ದ.ಕ. ಕಾಂಗ್ರೆಸ್ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಶಾಸಕ ಆಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಬೆಳ್ತಂಗಡಿ ಎಪಿಎಂಸಿ ಅಧ್ಯಕ್ಷ ಕೇಶವ ಗೌಡ ಬೆಳಾಲು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶೈಲೇಶ್ ಕುಮಾರ್, ಜಿ.ಪಂ ಸದಸ್ಯ ಶೇಖರ ಕುಕ್ಕೇಡಿ, ತಾಲೂಕು ಯೂತ್ ಕಾಂಗ್ರೇಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷ ಚಂದನ್ ಕಾಮತ್, ಮೂಡುಬಿದಿರೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಲೇರಿಯನ್, ಮುಂತಾದವರು ಉಪಸ್ಥಿತರಿದ್ದರು.