ನವದೆಹಲಿ, ಏ 1: ಐಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಗೀಡಾಗಿರುವ 38 ಭಾರತೀಯರ ಕಳೇಬರವನ್ನು ಭಾರತಕ್ಕೆ ತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಜನರಲ್ ವಿ.ಕೆ. ಸಿಂಗ್ ಇರಾಕ್ ಗೆ ಪ್ರಯಾಣ ಬೆಳೆಸಿದ್ದಾರೆ. ಇದಕ್ಕೂ ಮೊದಲು ಮಾಧ್ಯಮದೊಂದಿಗೆ ಮಾತನಾಡಿದ ಸಚಿವ 38 ಭಾರತೀಯರ ಮೃತದೇಹಗಳನ್ನು ಮರಳಿ ತರಲು ಮೊಸುಲ್'ಗೆ ತೆರಳುತ್ತಿದ್ದೇನೆ. ಮತ್ತೊಬ್ಬ ಭಾರತೀಯನ ಮೃತದೇಹದ ಡಿಎನ್ಎ ಪರೀಕ್ಷೆ ಪ್ರಗತಿಯಲ್ಲಿದೆ. ಹೀಗಾಗಿ ಓರ್ವ ಭಾರತೀಯನ ಮೃತದೇಹವನ್ನು ಮರಳಿ ತರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
38 ಭಾರತೀಯರ ಮೃತದೇಹಗಳನ್ನು ಭಾರತಕ್ಕೆ ಮರಳಿ ತರುತ್ತಿದ್ದಂತೆಯೇ ಮೃತರ ಕುಟುಂಬಸ್ಥರಿಗೆ ಯಾವುದೇ ಸಂಶಯಗಳು ಬಾರದಂತೆ ಸಾಕ್ಷ್ಯಾಧಾರಗಳು ಹಾಗೂ ದಾಖಲೆಗಳ ಮೂಲಕ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದರು. ಇದೇವೇಳೆ ಮೃತರ ಕುಟುಂಬಸ್ಥರ ಕುರಿತು ತೀವ್ರ ಸಂತಾಪ ಸೂಚಿಸಿದರು. 2014ರಲ್ಲಿ ಅಪಹರಣಕ್ಕೊಳಗಾಗಿದ್ದ 39 ಭಾರತೀಯರು ಹತ್ಯೆಗೀಡಾಗಿದ್ದಾರೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ದೃಢಪಡಿಸಿದ್ದರು.ಶೀಘ್ರವೇ 39 ಮೃತದೇಹಗಳನ್ನು ತವರಿಗೆ ತರವುದಾಗಿಯೂ ಸುಷ್ಮಾ ಸ್ವರಾಜ್ ತಿಳಿಸಿದ್ದರು.
ಇರಾಕ್ ನ ಎರಡನೇ ಅತ್ಯಂತ ದೊಡ್ಡ ನಗರವಾದ ಮೊಸುಲ್ ಅನ್ನು ಇಸಿಸ್ ಉಗ್ರರು 2014ರಲ್ಲಿ ವಶಕ್ಕೆ ಪಡೆದಿದ್ದರು. ಭಾರತದ 40 ಕಾರ್ಮಿಕರ ತಂಡವನ್ನು ಈ ಉಗ್ರರು ಆಗ ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಇವರಲ್ಲಿ ಹೆಚ್ಚಿನವರು ಪಂಜಾಬ್ ರಾಜ್ಯ ಮೂಲದವರಾಗಿದ್ದಾರೆ. ಇವರಲ್ಲಿ ಗುರ್ದಾಸ್ಪುರದ ಹರ್ಜೀತ್ ಮಸೀಹ್ ಉಗ್ರರಿಂದ ತಪ್ಪಿಸಿಕೊಂಡು ಭಾರತಕ್ಕೆ ಮರಳಿದ್ದರು.
ಇನ್ನು ಸೋಮವಾರದೊಳಗೆ ಕಳೇಬರವನ್ನು ಭಾರತಕ್ಕೆ ತರುವ ಸಾಧ್ಯತೆ ಇದೆ.