ಕುಂದಾಪುರ, ಜೂ 16 (Daijiworld News/MSP): ಬೆಂಗಳೂರಿನಿಂದ ಕೋಟೇಶ್ವರದ ಮನೆಗೆ ಹೊರಟಿದ್ದ ಯುವಕ ಹೃದಯಾಘಾತದಿಂದ ಬಸ್ನಲ್ಲಿಯೇ ಸಾವನ್ನಪ್ಪಿದ ಘಟನೆ ಜೂ.16ರಂದು ವರದಿಯಾಗಿದೆ.
ಕೋಟೇಶ್ವರ ಕುಂಬ್ರಿಯ ವಿಷ್ಣುಮೂರ್ತಿ ಅವರ ಮಗ ಚೈತನ್ಯ (25) ಬಸ್ನಲ್ಲಿ ಸಾವನ್ನಪ್ಪಿದ ದುರ್ದೈವಿ. ಬೆಂಗಳೂರಿನ ಮಾರತಹಳ್ಳಿಯಲ್ಲಿ ಸಾಪ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿರುವ ಚೈತನ್ಯ ಜೂ.15 ರಂದು ರಾತ್ರಿ 9 ಗಂಟೆಗೆ ಊರಿಗೆ ಬರಲು ದುರ್ಗಾಂಬಾ ಬಸ್ಸಿನಲ್ಲಿ ಹೊರಟಿದ್ದರು. ತಂದೆ ವಿಷ್ಣುಮೂರ್ತಿಯವರಿಗೆ ಇಂದು ಅಂದರೆ ಜೂ.16 ಬೆಳಿಗ್ಗೆ6.30 ಪೋನ್ ಮಾಡಿ ತಾನು ಬಾರ್ಕೂರುನಲ್ಲಿ ಇರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ವಿಷ್ಣುಮೂರ್ತಿ ಅವರು ಬೆಳಿಗ್ಗೆ 7.30 ಗಂಟೆಗೆ ಮಗ ಚೈತನ್ಯರಿಗೆ ಪುನಃ ಕರೆ ಮಾಡಿದಾಗ ಆತನ ಪೋನ್ನ್ನು ಬಸ್ಸಿನ ಚಾಲಕನು ರೀಸಿವ್ ಮಾಡಿ ನಿಮ್ಮ ಮಗನು ಬಸ್ಸಿನಲ್ಲಿ ಅಸ್ವಸ್ಥನಾಗಿದ್ದು ಕುಂದಾಪುರದ ವಿನಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿದ್ದರು.
ಅದರಂತೆ ವಿಷ್ಣುಮೂರ್ತಿ ಕುಂದಾಪುರದ ವಿನಯಾ ಆಸ್ಪತ್ರೆಗೆ ಬಂದಾಗ ಅಲ್ಲಿನ ವೈದ್ಯಾಧಿಕಾರಿಯವರು ಚೈತನ್ಯರವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಚೈತನ್ಯರವರು ಹೃದಯಾಘಾತದಿಂದ ಅಥವಾ ಇತರ ಯಾವುದೋ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿದ್ದು ಮೃತರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಎನ್ನಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.