ಮಂಗಳೂರು, ಜೂ 16 (Daijiworld News/MSP): ಜೂನ್ 18 ರಂದು ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯ ಪೂರ್ವಸಿದ್ಧತೆಗೆ ಸಂಬಂಧಪಟ್ಟಂತೆ ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳು ಸಿದ್ಧವಾಗಿವೆ.
ಮಂಗಳೂರು ತಾಲೂಕಿನಲ್ಲಿ 24, ಮೂಡುಬಿದ್ರೆ ತಾಲೂಕಿನಲ್ಲಿ 4, ಬಂಟ್ವಾಳ ತಾಲೂಕಿನಲ್ಲಿ 7, ಪುತ್ತೂರು ತಾಲೂಕಿನಲ್ಲಿ 9, ಬೆಳ್ತಂಗಡಿ ತಾಲೂಕಿನಲ್ಲಿ 4, ಸುಳ್ಯ ತಾಲೂಕಿನಲ್ಲಿ 3 ಪರೀಕ್ಷಾ ಕೇಂದ್ರಗಳಿದ್ದು, ಈ ಪೈಕಿ ಸರಕಾರಿ 12, ಅನುದಾನಿತ 22, ಅನುದಾನ ರಹಿತ 17 ಪರಿಕ್ಷಾ ಕೇಂದ್ರಗಳು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈಗಾಗಲೇ ಪೂರ್ವಾಭಾವಿ ಸಭೆಯನ್ನು ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರದ ಸುತ್ತ 200 ಮೀ ನಿಷೇಧಿತ ಪ್ರದೇಶ ಘೋಷಿಸಲಾಗಿದೆ. ಪರೀಕ್ಷಾ ಕೇಂದ್ರದ ಹತ್ತಿರವಿರುವ ಜೆರಾಕ್ಸ್ ಅಂಗಡಿಯನ್ನು ಮುಚ್ಚಿಸಲು, ಪರೀಕ್ಷಾ ಕೇಂದ್ರಕ್ಕೆ ಭದ್ರತೆ ಒದಗಿಸಲು, ವಿದ್ಯುಚ್ಚಕ್ತಿ ವ್ಯವಸ್ಥೆ ಮತ್ತು ಸಾರಿಗೆ ವ್ಯವಸ್ಥೆ ಒದಗಿಸಲು ಆದೇಶಿಸಿರುತ್ತಾರೆ.
ನೊವೆಲ್ ಕೊವಿಡ್ ಕೊರೋನಾ ವೈರಸ್ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಪಾಲಿಸಲು ಸೂಚಿಸಿದೆ. ಪ್ರತಿ ಕೇಂದ್ರದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗಳಿಗನುಗುಣವಾಗಿ ಥರ್ಮಲ್ ಸ್ಕ್ಯಾನರ್ಗಳನ್ನು ಮತ್ತು ಸ್ಯಾನಿಟೈಸರ್ಗಳ ವ್ಯವಸ್ಥೆ ಮಾಡಲಾಗಿತ್ತದೆ. ವಿದ್ಯಾರ್ಥಿಗಳು ಪ್ರವೇಶಿಸುವಾಗ ಮತ್ತು ಹೊರಗಡೆ ತೆರಳುವಾಗ ಸಾಮಾಜಿಕ ಅಂತರವನ್ನು ಕಾಪಾಡಲು ಈಗಾಗಲೇ ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಮಳೆಯಿರುವುದರಿಂದ ಶೀತವಿರುವ ಮಕ್ಕಳನ್ನು ಬೇರೆಯೇ ಕೊಠಡಿಯಲ್ಲಿ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಒದಗಿಸಿರುತ್ತಾರೆ. ಕೇರಳ ಗಡಿ ಪ್ರದೇಶಗಳಿಂದ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಬರಲು ಉಚಿತ ಬಸ್ಸು ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಬಸ್ಸಿಗೂ ನೋಡಲ್ ಆಫೀಸರ್ ನೇಮಿಸಲಾಗಿದೆ. ಕೇರಳ ಗಡಿ ಪ್ರದೇಶದವರೆಗೆ ವಿದ್ಯಾರ್ಥಿಗಳೇ ಬರಬೇಕಾಗಿದೆ. ವಿದ್ಯಾರ್ಥಿಗಳು ಗಡಿ ಪ್ರದೇಶದಲ್ಲಿ ಬೆಳಗ್ಗೆ 7 ಗಂಟೆಗೆ ಹಾಜರಾಗಬೇಕು. ವಿದ್ಯಾರ್ಥಿಗಳು ಪ್ರವೇಶ ಪತ್ರ ಮತ್ತು ಗುರುತಿನ ಚೀಟಿಯನ್ನು ತರಬೇಕು. ವಿದ್ಯಾರ್ಥಿಗಳು ಬರುವಾಗ ನೀರಿನ ಬಾಟಲ್, ತಿಂಡಿ ಮತ್ತು ಊಟದ ಟಿಫಿನ್ನನ್ನು ತರಬಹುದು.
ಮಾರ್ಚ್ನಲ್ಲಿ ಪರೀಕ್ಷೆ ಬರೆಯಲಿದ್ದ 33264 ವಿದ್ಯಾರ್ಥಿಗಳಲ್ಲಿ 6322 ವಿದ್ಯಾರ್ಥಿಗಳು ಹೊರಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 26942 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪ್ರತಿ ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳಿಗೆ ತೊಂದರೆಯಾಗದ ಹಾಗೆ ನೋಡಲ್ ಆಫೀಸರ್ ನೇಮಿಸಲಾಗಿದೆ.
ತಾಲೂಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಸ್ಸಿನ ವ್ಯವಸ್ಥೆ ಬಯಸಿರುವ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ಜವಾಬ್ದಾರಿಯನ್ನು ಸಂಬಂಧಿಸಿದ ಕಾಲೇಜಿನ ನೋಡಲ್ ಅಧಿಕಾರಿಗೆ ವಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಪೋಷಕರಿಗೆ ಯಾವುದೇ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆ 0824-2453787 ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ