ಉಳ್ಳಾಲ, ಜೂ. 16 (DaijiworldNews/SM): ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸಮುದ್ರ ಬೋರ್ಗರೆಯುತ್ತಿದ್ದು, ಸೋಮೇಶ್ವರ ದೇವಸ್ಥಾನದ ಬಳಿ ಭಾಗಶ: ಹಾನಿಗೊಂಡಿದ್ದ ಮನೆಯೊಂದು ಸಂಪೂರ್ಣ ಸಮುದ್ರಪಾಲಗಿದೆ. ಸಮುದ್ರದ ಅಬ್ಬರಕ್ಕೆ ಸುಮಾರು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದೆ.
ಸೋಮೇಶ್ವರ ದೇವಸ್ಥಾನ ಬಳಿ ನಿವಾಸಿ ಮೋಹನ್ ಅವರಿಗೆ ಸೇರಿದ ಮನೆ ಸಂಪೂರ್ಣ ಸಮುದ್ರ ಪಾಲಾಗಿದ್ದು, ಕಳೆದ ಬಾರಿ ಸಮುದ್ರ ಕೊರೆತಕ್ಕೆ ಮನೆ ಭಾಗಶ: ಹಾನಿಯಾಗಿತ್ತು. ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಕೊರೆತಕ್ಕೆ ಶಾಶ್ವತ ಕಾಮಗಾರಿಯ ಪರಿಣಾಮ ಸೋಮೇಶ್ವರ ಕಡಲತೀರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು ಅನೇಕ ತೆಂಗಿನ ಮರ ಸೇರಿದಂತೆ ಸಮುದ್ರ ತೀರ ಪ್ರದೇಶಗಳು ಸಮುದ್ರ ಪಾಲಾಗುತ್ತಿದೆ.
ಉಳ್ಳಾಲದಲ್ಲಿ ಬಿರುಸುಗೊಂಡ ಸಮುದ್ರ :
ಉಳ್ಳಾಲದ ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್ ಬಳಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು ಇಲ್ಲಿ ಶಾಶ್ವತ ಕಾಮಗಾರಿ ಆರಂಭಗೊಂಡಿದ್ದು, ಈ ಪ್ರದೇಶಗಳಲ್ಲಿ ಮೆನಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ. ಸೋಮೇಶ್ವರ ಉಚ್ಚಿಲದಲ್ಲಿಯೂ ಕಡಲ್ಕೊರೆತ ಆರಂಭಗೊಂಡಿದ್ದು, ಕಳೆದ ಬಾರಿ ಉಚ್ಚಿಲ ಬೀಚ್ ಎಂಡ್ ಪಾಯಿಂಟ್ ಸಂಪರ್ಕಿಸುವ ರಸ್ತೆ ಕುಸಿದು ಹೋಗಿತ್ತು. ಇಲ್ಲಿ ಶಾಶ್ವತ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಕಡಲ್ಕೊರೆತ ಹೆಚ್ಚಳಕ್ಕೆ ಕಾರಣವಾಗಿದೆ. ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದೆ.