ಬಂಟ್ವಾಳ, ಜೂ. 16 (DaijiworldNews/SM): ಇಲ್ಲಿನ ಸಿದ್ದಕಟ್ಟೆ-ಸಂಗಬೆಟ್ಟುವಿನಲ್ಲಿ ಅಣ್ಣ-ತಂಗಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಸಂಗಬೆಟ್ಟು ನಿವಾಸಿಗಳಾದ ನೀಲಯ್ಯ ಶೆಟ್ಟಿಗಾರ್ (42) ಹಾಗೂ ಅವರ ಸಹೋದರಿ ಕೇಸರಿ (39) ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇವರ ಶವ ಒಂದೇ ಕೊಠಡಿಯ ಮಂಚದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ, ಅದೇ ಮನೆಯಲ್ಲಿ ಇವರ ಸಹೋದರ, ಪತ್ನಿ, ಪುತ್ರ ಕೂಡ ಇದ್ದರು. ರಾತ್ರಿ ಘಟನೆ ನಡೆದಿದ್ದು, ನೀಲಯ್ಯ ಶೆಟ್ಟಿಗಾರ್ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು. ಅಲ್ಲದೆ ಅಣ್ಣ-ತಂಗಿ ಕೋಣೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೆಯವರು ಕೇಸು ದಾಖಲಿಸಿಕೊಂಡಿದ್ದರು.
ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಎಸ್ಐ ಪ್ರಸನ್ನ, ವೃತ್ತ ನಿರೀಕ್ಷಕ ಟಿ.ಡಿ ನಾಗರಾಜ್ ಅವರ ನೇತೃತ್ವದ ತಂಡ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಹಾಗೂ ಸಂಶಯಾಸ್ಪದ ಸಾವು ಎಂದು ಕೇಸು ದಾಖಲಿಸಿಕೊಂಡಿದ್ದಾರೆ. ಮನೆಯವರು ಆತ್ಮಹತ್ಯೆ ಎಂದು ಕೇಸು ನೀಡಿದರೂ ಕೂಡ ಸಾವಿನ ಕುರಿತಂತೆ ಒಂದಿಷ್ಟು ಅನುಮಾನಗಳು ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ, ಸಂಶಯಾಸ್ಪದ ಸಾವು ಎಂದು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದೆ.