ಮೂಡುಬಿದಿರೆ, ಜೂ 17 (Daijiworld News/MSP): ಮೂಡುಬಿದಿರೆ ವ್ಯಾಪ್ತಿಯಲ್ಲಿ ಕಾಡುಕೋಣವೊಂದು ಪ್ರತ್ಯಕ್ಷವಾದ ಘಟನೆ ಮಂಗಳವಾರ ನಡೆದಿದೆ. ಮಂಗಳವಾರ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಕರಿಂಜೆಗುತ್ತು ಅಸುಪಾಸಿನಲ್ಲಿ ಕಾಡುಕೋಣ ಕಾಣಸಿಕ್ಕಿತ್ತು. ತಕ್ಷಣ ಸ್ಥಳೀಯರು ಅರಣ್ಯ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಬಂದ ಅರಣ್ಯ ಇಲಾಖಾ ಅಧಿಕಾರಿಗಳು ಆ ಪರಿಸರದಲ್ಲಿ ದಿನವಿಡೀ ಹುಡುಕಾಡಿದರು ಕಾಣಸಿಕ್ಕಿರಲಿಲ್ಲ. ರಾತ್ರಿ ಸುಮಾರು 9.30ರ ವೇಳೆಗೆ ಕಲ್ಲಬೆಟ್ಟು ಗಂಟಾಲ್ಕಟ್ಟೆ ಚರ್ಚ್ ಬಳಿ ಅಸ್ವಸ್ಥಗೊಂಡ ರೀತಿಯಲ್ಲಿ ಕಾಣಸಿಕ್ಕಿದೆ.
ಎಳೆಯ ಹರೆಯದ ಈ ಕಾಡುಕೋಣವು ನಾಲಗೆ ಹೊರಚಾಚಿಕೊಂಡು ತೀರಾ ಅಶಕ್ತ ಸ್ಥಿತಿಯೊಂದಿಗೆ ಅಲೆದಾಡುವಂತಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಖೆ ಕಾಡುಕೋಣವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ವಸ್ಥಗೊಂಡ ಕಾಡುಕೋಣಕ್ಕೆ ಚಿಕಿತ್ಸೆ ನೀಡಲಾಗುತ್ತಿದ್ದು, ಸುಧಾರಿಸಿಕೊಂಡ ಬಳಿಕ ಕಾಡುಕೋಣವನ್ನು ಅರಣ್ಯಕ್ಕೆ ಬಿಡಲಾಗುವುದೆಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.