ಮಂಗಳೂರು, ಜೂ 17 (DaijiworldNews/PY) : ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಗಳ ಅಧ್ಯಕ್ಷ ಹಾಗೂ ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರ ನೇತೃತ್ವದ ಮೂರನೇ ಚಾರ್ಟರ್ಡ್ ವಿಮಾನ ಜೂನ್ 17ರ ಬುಧವಾರ ಶಾರ್ಜಾದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಏರ್ ಅರೇಬಿಯಾ ವಿಮಾನವು 168 ಹಿರಿಯ ನಾಗರಿಕರು ಹಾಗೂ ಆರು ಹಸುಗೂಸುಗಳನ್ನು ಕರೆತಂದಿದೆ. ಈ ವಿಮಾನವು ಜೂನ್ 16ರ ಮಂಗಳವಾರ ರಾತ್ರಿ 9.45 ಕ್ಕೆ ಶಾರ್ಜಾದಿಂದ ಹೊರಟು ಬುಧವಾರ ಮುಂಜಾನೆ 2.50 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಈ ಮೊದಲು ಪ್ರವೀಣ್ ಶೆಟ್ಟಿ ಅವರು ಜೂನ್ 1ರಂದು ರಾಸ್ ಅಲ್ ಖೈಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ಚಾರ್ಟರ್ಡ್ ವಿಮಾನ ಸ್ಪೈಸ್ ಜೆಟ್ನಲ್ಲಿ 181 ಪ್ರಯಾಣಿಕರನ್ನು ಕಳುಹಿಸಿದ್ದರು. ಉದ್ಯೋಗ ನಷ್ಟ, ಆರೋಗ್ಯದ ಸಮಸ್ಯೆ ಇತ್ಯಾದಿಗಳಿಂದ ಯುಎಇಯಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಹಾಯ ಮಾಡುವಲ್ಲಿ ಪ್ರಖ್ಯಾತ ಉದ್ಯಮಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.